

ಗುಂಡ್ಲುಪೇಟೆ: ತಾಲೂಕಿನ ಹುಲಿಗಿನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಜುಲೈ 26ರ ಮೊದಲನೇ ಶ್ರಾವಣ ಶನಿವಾರ ಶ್ರಾವಣ ಮಾಸದ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಚಿಕ್ಕತಿರುಪತಿ ಎಂದೇ ಕರೆಯಲಾಗುವ ದೇವಾಲಯದಲ್ಲಿ ಪ್ರತಿ ವರ್ಷವೂ ಮೊದಲನೇ ಶ್ರಾವಣ ಶನಿವಾರ ನಡೆಯುವ ಚಿಕ್ಕಜಾತ್ರೆಗೆ ತಾಲೂಕು, ಜಿಲ್ಲೆಯ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಬೆಳಗಿನಿಂದಲೂ ನಾನಾ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಮಧ್ಯಾಹ್ನ 12ಗಂಟೆಗೆ ಉತ್ಸವ ಮೂರ್ತಿಗಳನ್ನು ರಥದಲ್ಲಿರಿಸಿ ಪೂಜೆ ಸಲ್ಲಿಸಲಾಯಿತು.
ಮುಜರಾಯಿ ಅಧಿಕಾರಿಯೂ ಆದ ತಹಸೀಲ್ದಾರ್ ಎಂ.ಎಸ್.ಚಿನ್ಮಯಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಭಕ್ತರು ಗೋವಿಂದಾ ಗೋವಿಂದಾ ನಾಮಸ್ಮರಣೆಯೊಂದಿಗೆ ರಥವನ್ನು ದೇವಾಲಯದ ಸುತ್ತಲೂ ಎಳೆದು ತಮ್ಮ ಭಕ್ತಿಭಾವ ಮೆರೆದರು. ನವದಂಪತಿಗಳು ತೇರಿಗೆ ಹಣ್ಣು ದವನ ಎಸೆದು ಪುನೀತರಾದರು.
ಸಾರಿಗೆ ಸಂಸ್ಥೆಯು ಬೆಟ್ಟಕ್ಕೆ ಹೋಗುವ ಭಕ್ತರ ಅನುಕೂಲಕ್ಕಾಗಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಹಾಗೂ ತೆರಕಣಾಂಬಿಯಿಂದ 10 ಬಸ್‌ಗಳನ್ನು ನಿಯೋಜಿಸಿತ್ತು. ಸಾರಿಗೆ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲಿ ನಿಲ್ಲಿಸುವ ಮೂಲಕ ತೆರಕಣಾಂಬಿ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿದರು.