

ತೀರ್ಥಹಳ್ಳಿ: ತಾಲೂಕು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿಂದ ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಗೋ ಪೂಜೆ ಆಯೋಜಿಸಲಾಗಿತ್ತು.
ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷವಾಗಿ ರಥದ ಕೊಟ್ಟಿಗೆಯಲ್ಲಿ ತಳಿರು ತೋರಣಗಳಿಂದ ಅಲಂಕರಿಸಿದ್ದ ವೇದಿಕೆಯಲ್ಲಿ ಗೋ ಪ್ರೇಮಿಗಳು ಹಸುಗಳನ್ನು ಪೂಜಿಸಿ ಬೆಲ್ಲ ಬಾಳೆಹಣ್ಣುಗಳನ್ನು ತಿನ್ನಿಸಿದರು. ಗೋವನ್ನು ಪ್ರೀತಿಸುವ ಹಲವು ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಭಾಗವಹಿಸಿ ಕಿರಿಯರಿಗೆ ಗೋವುಗಳ ಮಹತ್ವ ತಿಳಿಸಿದರು.
ಗೋ ಸಾಕಣೆ ಮೂಲಕ ಬದುಕನ್ನು ಕಟ್ಟಿಕೊಂಡಿರುವ ಹಿರಿಯರಾದ ಲಕ್ಷ್ಮೀಪ್ರಭಾ, ಅಜಯ್ ಆಗುಂಬೆ, ವಕೀಲರ ಸಂಘದ ಅಧ್ಯಕ್ಷೆ ಸರಳಾ ಲೋಕೇಶ್, ಹಿರಿಯ ನಾಗರಿಕ ತಿಮ್ಮಪ್ಪ ಗೌಡ ಇತರರಿದ್ದರು.
ಪುಣ್ಯಕೋಟಿ ಗೋಶಾಲೆಯಲ್ಲಿ:
ಬುಕ್ಲಾಪುರದ ಹೊರಬೈಲಿನಲ್ಲಿ ರಕ್ಷಿಸಿದ ಹಾಗೂ ಅನಾಥ ಗೋವುಗಳ ರಕ್ಷಣೆಯ ಪುಣ್ಯಕೋಟಿ ಗೋಶಾಲೆಯಲ್ಲಿ ಗೋ ರಕ್ಷಕರಾದ ನಾಗರಾಜ್ ಕುಲಾಲ್ ದಂಪತಿ ಪ್ರತಿ ವರ್ಷದಂತೆ ಗೋ ಪೂಜೆ ನೆರೆವೇರಿಸಿದರು. ನಿರ್ಮಲಾ ನಾಗರಾಜ್, ಗ್ರಾಪಂ ಮಾಜಿ ಸದಸ್ಯ ಪೂರ್ಣೆಶ್, ಶ್ರೀರಾಮ ಸೇನೆಯ ನಾಗರಾಜ್ ಕುರುವಳ್ಳಿ, ಧನುಷ್, ಅಂಜನಾ ಹೆಗ್ಡೆ, ಅನಂತ್ ಇತರರಿದ್ದರು.
ಶಾಸಕ ಆರಗ ಜ್ಞಾನೇಂದ್ರ ದಂಪತಿ ಗುಡ್ಡೆಕೊಪ್ಪದ ತಮ್ಮ ನಿವಾಸದಲ್ಲಿ ಗೋವುಗಳಿಗೆ ಅಕ್ಕಿ ಬೆಲ್ಲ ತಿನ್ನಿಸಿ ಗೋ ಪೂಜೆ ನೆರವೇರಿಸಿದರು.