ಮಹಿಳೆಗೆ ನಟ ದರ್ಶನ್ ಮನೆಯ ನಾಯಿ ಕಚ್ಚಿದ ಪ್ರಕರಣ: ನಾಳೆ ಚಾರ್ಜ್‌ಶೀಟ್ ಸಲ್ಲಿಕೆ ಸಾಧ್ಯತೆ

1027698-darshan
Published on

ಬೆಂಗಳೂರು: ನಟ ದರ್ಶನ್ ಮನೆಯ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣ ತನಿಖೆಯನ್ನು ಪೂರ್ಣಗೊಳಿಸಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ದೋಷಾರೋಪಪಟ್ಟಿ ಸಿದ್ಧಪಡಿಸಿದ್ದು, ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ.


ಈ ಪ್ರಕರಣದಲ್ಲಿ ನಟ ದರ್ಶನ್ ಅವರ ಪಾತ್ರ ಇಲ್ಲದಿರುವ ಹಿನ್ನೆಲೆಯಲ್ಲಿ ಪ್ರಕರಣದಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಘಟನೆಗೂ ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ದರ್ಶನ್ ಮನೆಯ ಕೆಲಸಗಾರ ಹೇಮಂತ್ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.


ಸುಮಾರು ೧೫೦ಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಹೇಮಂತ್, ನಟ ದರ್ಶನ್, ಸಂತ್ರಸ್ತೆ ಅಮಿತಾ ಜಿಂದಲ್ ಸೇರಿ ಹಲವರ ಹೇಳಿಕೆಯನ್ನು ದಾಖಲಿಸಿದ್ದಾರೆ. ಐದಕ್ಕೂ ಹೆಚ್ಚು ಮಂದಿಯನ್ನು ಸಾಕ್ಷ್ಯಗಳಾಗಿ ಪರಿಗಣಿಸಿರುವ ಪೊಲೀಸರು, ಅವರ ಹೇಳಿಕೆಯನ್ನು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.


ಅ.೨೮ರಂದು ಬಿಇಎಂಎಲ್ ೫ನೇ ಹಂತದ ನಿವಾಸಿ ಅಮಿತಾ ಜಿಂದಾಲ್ ಎಂಬುವವರು ರಾಜರಾಜೇಶ್ವರಿನಗರದ ನಟ ದರ್ಶನ್ ಮನೆಯ ಸಮೀಪ ತಮ್ಮ ಕಾರನ್ನು ನಿಲುಗಡೆ ಮಾಡಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಕಾರಿನ ಬಳಿ ಬಂದಾಗ, ದರ್ಶನ್ ಮನೆಯ ಕೆಲಸಗಾರ ಹೇಮಂತ್ ಕಾರಿನ ಬಳಿಯೇ ನಾಯಿಯನ್ನು ಕಟ್ಟಿ ಹಾಕಿದ್ದರು. ಈ ವೇಳೆ ಆ ನಾಯಿ ಅಮಿತಾ ಜಿಂದಾಲ್ ಮೇಲೆ ದಾಳಿ ನಡೆಸಿ ಕಚ್ಚಿತ್ತು. ಈ ಸಂಬಂಧ ಅಮಿತಾ ಜಿಂದಾಲ್, ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಇದೀಗ ತನಿಖೆ ಪೂರ್ಣಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net