

ಮಡಿಕೇರಿ: ಭಾಗಮಂಡಲ ಹೋಬಳಿ ವ್ಯಾಪ್ತಿಯ ಸಣ್ಣಪುಲಿಕೋಟ್ ಗ್ರಾಮದ ನಿಶಾನಿ ಹೊಳೆ ಬದಿ ತೆಗೆದಿರುವ ಕೆರೆ ಊರಿನ ನೆಮ್ಮದಿಗೆ ಭಂಗವುಂಟು ಮಾಡಿದೆ. ಏತನ್ಮಧ್ಯೆ, ಇದೀಗ ಕೆರೆ ಬದಿಯಲ್ಲಿರುವ ಹೊಳೆ ಮಧ್ಯದಲ್ಲಿ ಮೋಟಾರ್ ಇಟ್ಟು ಕಾಫಿ ತೋಟಕ್ಕೆ ನೀರು ಹಾಯಿಸುತ್ತಿರುವುದು ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮುಂದಾಳತ್ವದಲ್ಲಿ ಕಾಫಿ ತೋಟಕ್ಕೆ ಹೊಳೆಯಿಂದ ನೀರು ಹಾಯಿಸಲಾಗುತ್ತಿದೆ. ಜನಪ್ರತಿನಿಧಿಯ ಉಸ್ತುವಾರಿಯಲ್ಲಿ ಕೆರೆ ತೆಗೆಯಲಾಗಿತ್ತು. ಇದೀಗ ಹೊಳೆ ಮಧ್ಯದಲ್ಲಿ ಮೋಟಾರ್ ಇಟ್ಟು ನೀರು ಹಾಯಿಸುತ್ತಿರುವುದಿಂದ ಸಣ್ಣಪುಲಿ ಕೋಟ್, ಅಯ್ಯಂಗೇರಿ ಭಾಗದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ ಎಂದು ಭಾಗಮಂಡಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸಿ.ಪಿ. ಹೇಮಾವತಿ ವಿಜಯವಾಣಿಯೊಂದಿಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಶುಕ್ರವಾರದಿಂದ ಹೊಳೆಯಿಂದ ತೋಟಕ್ಕೆ ನೀರು ಹಾಯಿಸಲಾಗುತ್ತಿದೆ. ಭಾನುವಾರ ಮಧ್ಯರಾತ್ರಿವರೆಗೂ ನೀರು ಹಾಯಿಸಲಾಗಿದ್ದು, ಸೋಮವಾರ ಮುಂಜಾನೆ ಮೋಟಾರ್, ಪೈಪ್‌ಗಳನ್ನು ಕೆರೆ ಬದಿಯಲ್ಲಿ ಇಡಲಾಗಿದೆ. ಇದಕ್ಕೂ ಮೊದಲು ಹೊಳೆ ನೀರು ನೇರವಾಗಿ ಕೆರೆಗೆ ಸೇರುವ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅದನ್ನು ಮುಚ್ಚಲಾಗಿದೆ ಎಂದು ಹೇಮಾವತಿ ಮಾಹಿತಿ ನೀಡಿದ್ದಾರೆ.
ಹೊಳೆ ದಿಕ್ಕು ಬದಲಾಯಿಸಿರುವ ಬಗ್ಗೆ ಜಿಲ್ಲಾಧಿಕಾರಿಗೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರೂ, ಇದುವರೆಗೂ ಯಾವ ಕ್ರಮ ಕೈಗೊಂಡಿಲ್ಲ. ವಿಜಯವಾಣಿಯಲ್ಲಿ ಗಮನ ಸೆಳೆಯುವ ವರದಿ ಪ್ರಕಟಗೊಂಡ ಬಳಿಕವೂ ಸ್ಪಂದಿಸಿಲ್ಲ ಎಂದು ಅತೃಪ್ತಿ ವ್ಯಕ್ತ ಪಡಿಸಿದ್ದಾರೆ.