ಸಿಡಿ ಪ್ರಕರಣದ ಶಂಕಿತರಿಗೆ ನೋಟಿಸ್​: ಯುವತಿಗೆ ಬೆದರಿಸಿರುವ ಆರೋಪ, ಬಾಕಿ ಇದೆ ಕಿಂಗ್​ಪಿನ್​ ವಿಚಾರಣೆ

naresh shravan
Published on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ್ದ ಅಶ್ಲೀಲ ಸಿಡಿ ಕೇಸ್​ನಲ್ಲಿ ಶಂಕಿತರಾದ ನರೇಶ್​ ಗೌಡ ಹಾಗೂ ಶ್ರವಣ್​ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೋಟಿಸ್​ ಜಾರಿ ಮಾಡಿದೆ. ಎಸ್​ಐಟಿ ತನಿಖಾಧಿಕಾರಿ ಎಸಿಪಿ ಧಮೇರ್ಂದ್ರ ಶನಿವಾರ ಬಹುತೇಕ ಶ್ರವಣ್​ ವಿಚಾರಣೆ ನಡೆಸಿದ್ದು, ನರೇಶ್​ನಿಂದ ಪ್ರಾಥಮಿಕ ಹಂತದ ಮಾಹಿತಿ ಮಾತ್ರ ಕಲೆ ಹಾಕಿದ್ದರು. ನರೇಶ್​ ವಿಚಾರಣೆ ನಡೆಸುವುದು ಇನ್ನೂ ಬಾಕಿ ಇದೆ ಎನ್ನಲಾಗಿದೆ.

ಹೀಗಾಗಿ ಸೋಮವಾರ 11 ಗಂಟೆಗೆ ನರೇಶ್​ ಗೌಡಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದರೆ, ಮಂಗಳವಾರ 11 ಗಂಟೆಗೆ ಶ್ರವಣ್​ಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರಮೇಶ್​ ಜಾರಕಿಹೋಳಿಯೇ ಯುವತಿಗೆ ವಿಡಿಯೋ ಮಾಡುವಂತೆ ಹೇಳಿರುವುದು ಸದ್ಯ ಬಹಿರಂಗಗೊಂಡ ವಿಡಿಯೋದಲ್ಲಿದೆ. ಆದರೆ, ಆ ವಿಡಿಯೋ ಜಾರಕಿಹೋಳಿ ಮೊಬೈಲ್​ನಲ್ಲಿ ಇದೆ ಎಂದು ಶ್ರವಣ್​ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗಿದೆ.

ಬಲವಂತವಾಗಿ ಹಾಗೂ ಬೆದರಿಸಿ ಲೈಂಗಿಕ ಸಂಪರ್ಕ ಬೆಳಸಿರುವುದಾಗಿ ಯುವತಿ ಹೇಳಿದ್ದಳು. ಸದ್ಯ ವೈರಲ್​ ಆಗಿರುವ ವಿಡಿಯೋ ಬಿಟ್ಟು ಇನ್ನೂ ಸಾಕಷ್ಟು ಯುವತಿಯರ ಜೊತೆಗಿರುವ ವಿಡಿಯೋ ಜಾರಕಿಹೊಳಿ ಮೊಬೈಲ್​ನಲ್ಲಿ ಇದೆ ಎಂದು ಯುವತಿಯೇ ನನಗೆ ಹೇಳಿದ್ದಳು. ಸ್ಟಿಂಗ್​ ಮಾಡಿರುವ ವಿಡಿಯೋ ನಾನು ನೋಡಲಿಲ್ಲ. ಇದರ ರಾ ಫುಟೇಜ್​ ಯುವತಿ ಮನೆಯಲ್ಲೆ ಇತ್ತು. ಯುವತಿ ಮನೆಗೂ ಜಾರಕಿಹೋಳಿ ಕಡೆಯವರು ಬಂದು ಹೋಗಿದ್ದರು. ಪೊಲೀಸ್​ ಸಂಪರ್ಕ ಮಾಡಿ ದೂರು ನೀಡಿ ಎಂದು ಯುವತಿಗೆ ತಿಳಿಸಿದ್ದೆವು. ಆದರೆ, ಯುವತಿ ಹೆದರಿ ದೂರು ನೀಡಲು ಹಿಂದೇಟು ಹಾಕಿದ್ದಳು. ನಿನ್ನ ಹಾಗೂ ನಿನಗೆ ಬೆಂಬಲ ಕೊಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜಾರಕಿಹೊಳಿ ಕಡೆಯವರು ಯುವತಿಗೆ ಬೆದರಿಸಿದ ಹಿನ್ನೆಲೆಯಲ್ಲಿ ಜೀವ ಭಯದಿಂದ ನಾವೂ ಊರು ಬಿಟ್ಟಿದ್ದೆವು ಎಂದು ಶ್ರವಣ್​ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ.

ಪ್ರಕರಣದ ಕಿಂಗ್​ಪಿನ್​ ಎಂಬ ಆರೋಪ ಹೊತ್ತಿರುವ ನರೇಶ್​ನ್ನು ಸೋಮವಾರ ಕೂಲಂಕಷ ವಾಗಿ ವಿಚಾರಣೆ ನಡೆಸಲು ಎಸ್​ಐಟಿ ಮುಂದಾಗಿದ್ದು, ಪೂರ್ವ ತಯಾರಿ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net