

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಕ್ತಾಯದ ಹಂತಕ್ಕೆ ತಲುಪಿದ್ದು, ಶೀಘ್ರವೇ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ.
ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಏ. 18ರಂದು ನಡೆದಿದ್ದ ನೇಹಾ ಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದೆ. ಸಿಐಡಿ ಅಧಿಕಾರಿಗಳು ಹಂತಕ ಫಯಾಜ್ ಮತ್ತವರ ಪಾಲಕರು, ನೇಹಾ ಪಾಲಕರನ್ನು ವಿಚಾರಣೆ ಮಾಡಿದೆ. ಫಯಾಜ್‌ನನ್ನು ಹತ್ಯೆ ನಡೆದ ಜಾಗಕ್ಕೆ ಕರೆಂದು ಸ್ಥಳ ಮಹಜರು ನಡೆಸಿತ್ತು. ಆರು ದಿನದವರೆಗೆ ಸಿಐಡಿ ವಶದಲ್ಲಿದ್ದ ಫಯಾಜ್‌ನನ್ನು ವಿವಿಧ ವಿಚಾರಣೆಗೊಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿರಂಜನ ಹಿರೇಮಠ ವ್ಯಕ್ತಪಡಿಸಿದ್ದ ಅನುಮಾನಿತರನ್ನೂ ಸಿಐಡಿ ವಿಚಾರಣೆ ಮಾಡಿದೆ. ಫಯಾಜ್ ಹೊರತುಪಡಿಸಿ 10ಕ್ಕೂ ಹೆಚ್ಚು ಜನರನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇವೆಲ್ಲವನ್ನೂ ಕ್ರೋಡೀಕರಿಸಿ ವಾರದೊಳಗೆ ಸಿಐಡಿ ಅಧಿಕಾರಿಗಳು ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ವಿಚಾರಣೆಯು ಸರ್ಕಾರ ನೇಮಿಸಿದ ವಿಶೇಷ ನ್ಯಾಯಾಲಯದ ಮೂಲಕ ನಡೆಯಲಿದೆ.