ಕಾರ್ವಿುಕ ಕಾರ್ಡ್ ನೀಡಲು ಹಣ ವಸೂಲಿ

Charge money for issuing a labour card
Published on

ಬ್ಯಾಡಗಿ: ಕಾರ್ವಿುಕ ಕಾರ್ಡ್ ನೀಡಲು ಇಲಾಖೆ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನೊಂದ ಕಾರ್ವಿುಕರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.

ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಅಹವಾಲು ಸ್ವೀಕಾರ ಸಭೆಗೆ ಆಗಮಿಸಿದ್ದ ಕಾರ್ವಿುಕರು, ತಾಲೂಕಿನ ಕಟ್ಟಡ ಹಾಗೂ ಇತರೆ ಕಾರ್ವಿುಕರು ಇಲಾಖೆ ನೀಡುತ್ತಿರುವ ಹೊಸ ಕಾರ್ಡ್ ಪಡೆಯಲು ಹಾಗೂ ಮರು ನೋಂದಣಿ ಮಾಡಿಸಲು ಹಣ ನೀಡಬೇಕಿದೆ. ಈ ಕುರಿತು ಹಲವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಾರ್ವಿುಕರಿಗೆ ನ್ಯಾಯ ಒದಗಿಸಬೇಕು ಎಂದು ದೂರು ಸಲ್ಲಿಸಿದರು.

ಪಟ್ಟಣದಲ್ಲಿ ಆಧಾರ್ ಕಾರ್ಡ್​ಗೆ ತಿದ್ದುಪಡಿ ಹೊಸ ಕಾರ್ಡ್ ನೀಡಲು ಟೆಂಡರ್ ಪಡೆದವರು ಜನರಿಂದ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಸಾಕಷ್ಟು ಹೊರೆಯಾಗುತ್ತಿದೆ. ನಿಗದಿತ ಸಮಯದಲ್ಲಿ ಆಧಾರ್ ತಿದ್ದುಪಡಿ ಆಗುತ್ತಿಲ್ಲ ಈ ಸಮಸ್ಯೆ ಬಗೆಹರಿಸಬೇಕು ಎಂದು ನಿವಾಸಿ ನಿಯಾಜ್ ಅಹಮ್ಮದ್ ದೂರು ಸಲ್ಲಿಸಿದರು.

ಅಧಿಕಾರಿಗಳಿಂದ ಹೆದ್ದಾರಿ ಸಮಸ್ಯೆ: ರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯ ಕಿರಣಕುಮಾರ ಎಂ.ಎಲ್. ಅವರು, ಸೊರಬ-ಗಜೇಂದ್ರಗಡ ರಾಜ್ಯ ಹೆದ್ದಾರಿ ಅಗಲೀಕರಣ ವಿಳಂಬಕ್ಕೆ ಉಪವಿಭಾಗಾಧಿಕಾರಿ ನಿರ್ಲಕ್ಷ್ಯ ಧೋರಣೆ ಕಾರಣ. ಕಳೆದ 15 ವರ್ಷದಿಂದ ಸಾರ್ವಜನಿಕರ ಹಿತಾಸಕ್ತಿಗೆ ನಾವು ಹೋರಾಟ ಮಾಡುತ್ತಿದ್ದೇವೆ. ಆದರೆ, ಮುಖ್ಯರಸ್ತೆ ಅಗಲೀಕರಣ ಕುರಿತು ಉಪವಿಭಾಗಾಧಿಕಾರಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಾರ್ವಜನಿಕ ಹಿತಾಸಕ್ತಿ ಮರೆತು ಕುಳಿತಿರುವ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಅಗಲೀಕರಣಕ್ಕೆ ಸೂಚಿಸಬೇಕು ಎಂದು ಲೋಕಾಯುಕ್ತ ಡಿವೈಎಸ್​ಪಿ ಮಧುಸೂದನ ಸಿ. ಅವರಿಗೆ ದೂರು ಸಲ್ಲಿಸಿದರು.

ಅಂಗವಿಕಲರ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ ಅವರು, ಗೃಹ ಮಂಡಳಿ ಯೋಜನೆಯಡಿ ನಿರ್ವಿುಸಿದ ಮನೆಗಳಿಗೆ ಇಂದಿಗೂ ಮೂಲಸೌಲಭ್ಯ ಕಲ್ಪಿಸಿಲ್ಲ. ಮನೆಗಳು ಪುರಸಭೆಗೆ ಹಸ್ತಾಂತರವಾಗಿಲ್ಲವೆಂದು ದೂರು ಸಲ್ಲಿಸಿದರು. ಬೆಟ್ಟದ ಮಲ್ಲೇಶ್ವರ ನಿವಾಸಿ ಫರೀದಾಬಾನು ನದಿಮುಲ್ಲಾ, ಬೆಟ್ಟದ ಮಲ್ಲೇಶ್ವರ ನಗದಲ್ಲಿರುವ ಸರ್ಕಾರಿ ಶಾಲೆ ಸೂಕ್ತ ರಕ್ಷಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಹಲವು ಬಾರಿ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಶಾಲೆಗೆ ಸೂಕ್ತ ರಕ್ಷಣೆ ಒದಗಿಸಿ ಸರ್ಕಾರಿ ಶಾಲೆ ಉಳಿಸಿ ಎಂದು ಮನವಿ ಮಾಡಿದರು.

ಹಿರೇಅಣಜಿ ಗ್ರಾಮದ ಲಕ್ಷ್ಮಮ್ಮ ಹಾಗೂ ಸರೋಜಮ್ಮ ಅವರು ನಮ್ಮ ಆಸ್ತಿಗೆ ಉತಾರ ನೀಡಲು ಗ್ರಾಮ ಪಂಚಾಯಿತಿಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಅರ್ಜಿ ಸಲ್ಲಿಸಿದರು.

ತಹಸೀಲ್ದಾರ್ ಫೀರೋಜ್ ಷಾ ಸೋಮನಕಟ್ಟೆ, ಲೋಕಾಯಕ್ತ ಇನ್​ಸ್ಪೆಕ್ಟರ್ ಮಂಜುನಾಥ ಪಂಡಿತ್, ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ., ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net