

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಆಧಾರ್ ಕಾರ್ಡ್ ತಿದ್ದುಪಡಿ ಹೆಸರಿನಲ್ಲಿ ಖಾಸಗಿಯವರು ಹಣ ವಸೂಲಿ ಮಾಡುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಬಿಎಸ್ಎನ್ಎಲ್ ಸೇರಿ ಇತರ ಸರ್ಕಾರಿ ಸೇವಾ ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ತಾಲೂಕಿನ ಹುಲ್ಲತ್ತಿ ಬಿಎಸ್ಎನ್ಎಲ್ ಗ್ರಾಹಕ ಕೇಂದ್ರದಲ್ಲಿ ಆಧಾರ್ ತಿದ್ದುಪಡಿಗೆ ಹಣ ಪಡೆಯುತ್ತಿರುವ ಕುರಿತು ಆರೋಪ ಕೇಳಿ ಬಂದಿದೆ.
ಬಿಎಸ್ಎನ್ಎಲ್ ಗ್ರಾಹಕರ ಸೇವಾ ಕೇಂದ್ರದಲ್ಲಿ ಕಳೆದ ಜುಲೈ 20ರಿಂದ ನಿತ್ಯವೂ ಆಧಾರ್ ಅಪಡೇಟ್ ಮಾಡಿಕೊಳ್ಳಲು 20 ಜನರಿಗೆ ಕೂಪನ್ ವಿತರಣೆ ಮಾಡಲಾಗುತ್ತಿದೆ. ಅದಕ್ಕಾಗಿ ಅಗತ್ಯವಿರುವ ಜನತೆ ಬೆಳಗ್ಗೆ 8 ಗಂಟೆಗೆ ಬಂದು ಕೂಪನ್ ತೆಗೆದುಕೊಂಡು ಹೋಗಬೇಕು. ನಂತರ 11 ಗಂಟೆಗೆ ಬಂದು ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಕೂಪನ್ ಕೊಡುವಾಗಲೇ ಸೇವಾ ಕೇಂದ್ರದ ಸಿಬ್ಬಂದಿ ಬರುವಾಗ 250 ರೂ. ತರುವಂತೆ ಹೇಳುತ್ತಾರೆ. ಹಣ ತರದ ಜನರ ಆಧಾರ್ ಅಪ್ಡೇಟ್ ಮಾಡುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರೂ. ಕೊಡಲು ಆರಂಭಿಸಿದ ದಿನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಸೇವಾ ಕೇಂದ್ರದ ಸಿಬ್ಬಂದಿ, ಮಹಿಳೆಯರಿಂದ ಹಣ ವಸೂಲಿಗೆ ನಿಂತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ತಾಲೂಕಿನ ಹುಲ್ಲತ್ತಿ ಗ್ರಾಮಸ್ಥರು ಆಧಾರ್ ಅಪ್ಡೇಟ್ ಮಾಡುವ ಸಲುವಾಗಿ ಬೆಳಗ್ಗೆ ಕೂಪನ್ ತೆಗೆದುಕೊಂಡು ಹೋಗಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಅಪ್ಡೇಟ್ ಮಾಡಲು ಬಂದಾಗ 250 ರೂ. ಕೊಡುವಂತೆ ಆಧಾರ್ ಕೇಂದ್ರದ ಸಿಬ್ಬಂದಿ ಕೇಳುತ್ತಾನೆ. ಇಷ್ಟು ಹಣ ಏಕೆ ಎಂದು ಗ್ರಾಮಸ್ಥ ಕೇಳಿದಾಗ, ಬೆಳಗ್ಗೆ ನಿನಗೆ ಹೇಳಿ ಕಳಸಿಲ್ವಾ ಎಂದು ಆತನಿಗೆ ಆವಾಜ್ ಹಾಕುತ್ತಾನೆ. ಇದರಿಂದ ಅನಿವಾರ್ಯವಾಗಿ ಗ್ರಾಮಸ್ಥ 250 ರೂ. ಕೊಡುತ್ತಾನೆ. ಹಣ ಪಡೆದ ಸಿಬ್ಬಂದಿ ಜೇಬಿನಲ್ಲಿ ಇಟ್ಟುಕೊಳ್ಳುತ್ತಾನೆ. ಈ ಎಲ್ಲ ದೃಶ್ಯವನ್ನು ಸೆರೆ ಹಿಡಿದಿರುವ ಗ್ರಾಮಸ್ಥರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಆಧಾರ್ ಕಾರ್ಡ್ ಅಪಡೇಟ್ ಮಾಡಲು ಸರ್ಕಾರದ ನಿಯಮಾವಳಿ ಪ್ರಕಾರ 50 ರೂ. ತೆಗೆದುಕೊಂಡು ಅದಕ್ಕೆ ರಸೀದಿ ನೀಡಬೇಕು. ಬಿಎಸ್ಎನ್ಎಲ್ ಗ್ರಾಹಕರ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸಲುವಾಗಿ ಬಂದರೆ ಒಬ್ಬರಿಂದ 250 ರೂ.ನಿಂದ 400 ರೂ.ವರೆಗೂ ಹಣ ವಸೂಲಿ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ತಹಸೀಲ್ದಾರರು, ಜಿಲ್ಲಾಧಿಕಾರಿ ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಸೇವಾ ಕೇಂದ್ರದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ. | ಜಗದೀಶ ಕೆ., ಹುಲ್ಲತ್ತಿ ಗ್ರಾಮಸ್ಥ ಬಿಎಸ್ಎನ್ಎಲ್ ಗ್ರಾಹಕರ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಹಣ ವಸೂಲಿ ಮಾಡುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಚಾರಿಸಲು ಅಲ್ಲಿನ ಸಿಬ್ಬಂದಿಗೆ ಬರಲು ಸೂಚಿಸಲಾಗಿದೆ. ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ಎಚ್.ಎನ್. ಶಿಹರಟ್ಟಿ, ತಹಸೀಲ್ದಾರ್ ರಾಣೆಬೆನ್ನೂರ