

ಚಾಮರಾಜನಗರ: ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಬುಧವಾರದಿಂದ ಗಿರಿಜಾ ಕಲ್ಯಾಣ ಮಹೋತ್ಸವ ಆರಂಭಗೊಂಡಿದ್ದು, ಜೂ.12ರಂದು ಮುಕ್ತಾಯಗೊಳ್ಳಲಿದೆ.
ದೇವಸ್ಥಾನದ ಶ್ರೀಕೆಂಪನಂಜಾಂಬ ಅಮ್ಮನವರ ಸಮೇತ ಶ್ರೀಚಾಮರಾಜೇಶ್ವರಸ್ವಾಮಿಯವರಿಗೆ ಬೆಳೆಯತಕ್ಕ ಗಿರಿಜಾ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಪೂಜೆ ಪುನಸ್ಕಾರಗಳು ಜರುಗಿದವು. ಬುಧವಾರ ಸಂಜೆ ಅನುಜ್ಞಾ ಪೂರ್ವಕ ಎಣ್ಣೆ ಅರಿಶಿಣ ಪ್ರದಾನ ನಡೆಯಿತು. ರಾತ್ರಿ ವರಪೂಜೆ ಮಹೋತ್ಸವ ಜರುಗಿತು.
ಜೂ.12ರವರೆಗೆ ಪೂಜೆ: ಜೂ.8ರ ಗುರುವಾರ ಬೆಳಗ್ಗೆ 10 ಗಂಟೆಗೆ ಅಂಕುರಾರ್ಪಣ ಪೂರ್ವಕ ಕನ್ನಡಿ ಕಲಶ ತರುವುದು, ನಂತರ ಮಂಗಳಸ್ನಾನ ಬೆಳೆದು ನಾಂದಿ ನಡೆದು ಗ್ರಹಯಜ್ಞ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಕಾಶಿಯಾತ್ರೆ ಮಹೋತ್ಸವವು ಬೆಳೆಯುತ್ತದೆ. ನಂತರ ರಾತ್ರಿ 8.10 ರಿಂದ 9 ಗಂಟೆಯವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅಕ್ಷತಾರೋಪಣೆ, ಧಾರಾ ಮಹೋತ್ಸವ, ಪ್ರಧಾನ ಹೋಮ, ಮಹಾಮಂಗಳಾರತಿ ಜರುಗಲಿದೆ.
9ರ ಶುಕ್ರವಾರ ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಲೋತ್ಸವವು ರಾತ್ರಿ ಔಪಾಸನೆ ಉಯ್ಯಲೋತ್ಸವವು ನಡೆಯಲಿದೆ. 10ರ ಶನಿವಾರ ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಲೋತ್ಸವವು ರಾತ್ರಿ ಔಪಾಸನೆ ಪಾಕಿನಿ ಮಹೋತ್ಸವವು ಜರುಗಲಿದೆ.
11ರ ಭಾನುವಾರದಂದು ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಲೋತ್ಸವವು ರಾತ್ರಿ ಔಪಾಸನೆ ಶೇಷಹೋಮ, ನಾಕಬಲಿ, ಹೊಳಲು ಸುತ್ತುವುದು ಗಜಾರೋಹಣ ಪೂಜೆ, ಗೃಹಪ್ರವೇಶ ಮಹೋತ್ಸವ ಹಾಗೂ 12ರ ಸೋಮವಾರ ಪ್ರಾತಃಕಾಲ ದೇವತಾ ಉದ್ವಾಸನೆ, ವಿವಾಹ ದೀಕ್ಷಾ ವಿಸರ್ಜನೆ ನಂತರ ಸ್ತಂಭ ಪೂಜಾ ರಾತ್ರಿ ಪುಷ್ಪಾಂದೋಳಿಕೋತ್ಸವ, ಶಯನೋತ್ಸವವೂ ನಡೆಯಲಿದೆ. ಗಿರಿಜಾ ಕಲ್ಯಾಣ ಮಹೋತ್ಸವದ ಪ್ರತಿದಿನ ಸಂಜೆ ಸಂಗೀತ, ಹರಿಕಥೆ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.