

ಮೈಸೂರು:ದಿವಂಗತ ಅನೂಪ್ ಕುಮಾರ್ ಅರಸ್ ರಚಿಸಿರುವ ‘ಅಧ್ಯಾಯ-ಜೀವನದ ಒಂದು ಪುಟ’ ಕೃತಿಯನ್ನು ನಮನ್ ಫೌಂಡೇಷನ್ ಅಧ್ಯಕ್ಷೆ ಶೈಲಜಾ ಪ್ರಸಾದ್ ಬಿಡುಗಡೆ ಮಾಡಿದರು.
ನಗರದ ಅರಸು ಜಿಮ್ಖಾನ ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅನೂಪ್ ಕುಮಾರ್ ಅರಸ್ ಅವರು ‘ಕಾವಾ’ದಲ್ಲಿ ಪದವಿ ಪಡೆದಿದ್ದು, ಪ್ರಾಚೀನ ಕಾಲದ ಹುಡುಕಾಟದಲ್ಲಿ ತೊಡಗಿಸಿಕೊಂಡು ಆಧ್ಯಾತ್ಮದತ್ತ ವಾಲಿದ್ದರು. ಕೋಡಿಮಠದ ಶ್ರೀಗಳೊಂದಿಗೆ ಸಂಪರ್ಕದಲ್ಲಿದ್ದರು. ಆತ್ಮಸಂವಾದ ಅವರಿಗೆ ಇಷ್ಟವಾಗಿತ್ತು. ಅಂಗವಿಕಲರಾಗಿದ್ದರೂ ಅನೂಪ್ ಕುಮಾರ್ ಅರಸ್ ಆತ್ಮವಿಶ್ವಾಸ ಮತ್ತು ದೃಢತೆಯ ಪ್ರತೀಕವಾಗಿದ್ದರು ಎಂದರು.
ಕೃತಿ ಕುರಿತು ಸಾಹಿತಿ ಗೋವಿಂದಸ್ವಾಮಿ ಗುಂಡಾಪುರ ಮಾತನಾಡಿ, ಅನೂಪ್ ಅವರಲ್ಲಿ ಆತ್ಮೀಯತೆ, ಸರಳತೆ ಇತ್ತು. ಕಷ್ಟ- ಸುಖ- ಚೆಲ್ಲಾಟ ಎಲ್ವವನ್ನು ಅನುಭವಿಸಿ ಈ ಕೃತಿಯನ್ನು ಬರೆದಿದ್ದು, ಇದೊಂದು ಶೃಂಗಾರ ಕಾವ್ಯದಂತಿದೆ ಎಂದು ಬಣ್ಣಿಸಿದರು.
ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ.ಎಂಜಿಆರ್ ಅರಸು ಮಾತನಾಡಿ, ರಾಜಕೀಯ, ಸಾಮಾಜಿಕ, ಶೆಕ್ಷಣಿಕ- ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅರಸು ಜನಾಂಗದ ಕೊಡುಗೆ ಅಪಾರ. ಅನೂಪ್ ಕುಮಾರ್ ಅರಸ್ ಅವರ ಈ ಕೃತಿಯ ಬಗ್ಗೆ ತಮ್ಮ ಚುಟುಕು ಸಾಹಿತ್ಯ ಪರಿಷತ್ ವತಿಯಂದ ಸಂವಾದ ಕಾರ್ಯಕ್ರಮ ಸಂಘಟಿಸುವುದಾಗಿ ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವಿಶೇಷಚೇತನರಾಗಿದ್ದ ಅನೂಪ್ ಇತರರಿಗೆ ಮಾದರಿಯಾಗುವಂತೆ ಬದುಕಿದ್ದಾರೆ. ಕೃತಿಯ ಮೂಲಕ ತಮ್ಮ ಅನುಭವ, ಜೀವನದ ಸಾರವನ್ನು ತೆರೆದಿಟ್ಟಿದ್ದಾರೆ ಎಂದು ಹೇಳಿದರು.
ಅನೂಪ್ ಕುಮಾರ್ ಅರಸ್ ಅವರ ತಂದೆ ಬಲದೇವರಾಜ ಅರಸ್, ತಾಯಿ ರತ್ನಪ್ರಭಾ ಅರಸ್, ಪತ್ನಿ ದೀಪ್ತಿ ರಾಜೇಶ್ವರಿ, ಪುತ್ರಿ ಉಪಾಧ್ಯಕ್ಷ ನವಳ ನಂದಿತಾ ಇದ್ದರು. ಅನೂಪ್ ಕುಮಾರ್ ಅರಸ್ ಕುರಿತು ಯಶಸ್ವನಿ, ನಮನ್ ಫೌಂಡೇಷನ್ ಕುರಿತು ಮಂಜುನಾಥ ಹೆಗಡೆ ಪರಿಚಯಿಸಿದರು. ಸಂಘಟಕರಾದ ರಮೇಶ್ ತಾಯೂರು, ಸಹನಾ, ಅನುಪಮಾ ಇತರರು ಇದ್ದರು.
ಕನಸು ನನಸು ಮಾಡಿದ ಕುಟುಂಬ: ಚಿಕ್ಕಂದಿನಲ್ಲೇ ಪೊಲೀಯೋ ಪೀಡಿತರಾಗಿದ್ದ ಅನೂಪ್ ಅಂಗವಿಕಲರಾಗಿದ್ದರೂ ಶ್ರೀಚಾಮರಾಜೇಂದ್ರ ದೃಶ್ಯಕಲಾ ಕಾಲೇಜು (ಕಾವಾ )ದಲ್ಲಿ ಕಲಿತು ಅನೂಪ್ ಆಧ್ಯಾತ್ಮಿಕ ಕೇಂದ್ರ ನಡೆಸುತ್ತಿದ್ದರು. ಅಂಗವಿಕಲ ಎನ್ನುವುದು ತಿಳಿದು ಕೂಡಾ ಅನೂಪ್ ಕುಮಾರ್ ಅರಸು ಅವರನ್ನು ಪ್ರೀತಿಸಿದ ದೀಪ್ತಿ ರಾಜೇಶ್ವರಿ ವಿವಾಹವಾಗಿ ಬದುಕು ಕಟ್ಟಿಕೊಂಡಿದ್ದರು.
ಕಾವಾದಲ್ಲಿ ಇದ್ದಾಗ ನಡೆದ ಘಟನೆಗಳನ್ನು ಅನೂಪ್ ದಾಖಲು ಮಾಡಿ, ಅಧ್ಯಾಯ- ಜೀವನದ ಒಂದು ಪುಟ ಕೃತಿಯನ್ನು ರಚಿಸಿದ್ದರು. ಆದರೆ ಅದು ಬಿಡುಗಡೆಗೆ ಮುನ್ನವೇ ಕೋವಿಡ್ ಸಂದರ್ಭದಲ್ಲಿ ಅವರು ನಿಧನರಾದರು. ಹೀಗಾಗಿ ಅವರ ತಂದೆ- ತಾಯಿ, ಪತ್ನಿ- ಪುತ್ರಿ ಹಾಗೂ ಸ್ನೇಹಿತ ವಲಯ ಸೇರಿ, ಕೃತಿಯನ್ನು ಪ್ರಕಟಿಸಿ, ಬಿಡುಗಡೆ ಮಾಡುವ ಮೂಲಕ ಅನೂಪ್ ಕನಸನ್ನು ನನಸು ಮಾಡಿದರು. ಅನೂಪ್ ಅವರ ಆಪ್ತ ವಲಯದಲ್ಲಿದ್ದ ಗೀತಾ ರಫೀಕ್, ಎಸ್.ಆರ್. ಮಧುಸೂದನ್, ಭಾರ್ಗವಿ ಇತರರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.