

ಬೀರೂರು: ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಮಟ್ಟದ ಜನ ಸಂಪರ್ಕ ಸಭೆ ಅರ್ಜಿ ಸ್ವೀಕಾರ ಕೇಂದ್ರವನ್ನು ಸ್ಥಾಪಿಸಿದೆ. ಆದರೆ ಬೀರೂರಿನ ನಾಡಕಚೇರಿಯಲ್ಲಿ ಸ್ಥಾಪಿಸಿರುವ ಜನ ಸಂಪರ್ಕ ಸಭೆ ಅರ್ಜಿ ಸ್ವೀಕಾರ ಕೇಂದ್ರಕ್ಕೆ ಮೂಲಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕರೊಬ್ಬರು ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ನಾಡಕಚೇರಿಯಲ್ಲಿ ಜನಸಂಪರ್ಕ ಸಭೆಯ ಅರ್ಜಿ ಸ್ವೀಕಾರ ಕೇಂದ್ರ ಸೋಮವಾರದಿಂದ ಶನಿವಾರದವರೆಗೂ ತೆರೆದಿರುತ್ತಿದೆ. ಆದರೆ ಈ ಕಚೇರಿಯಲ್ಲಿ ಶನಿವಾರದವರೆಗೂ ಯಾವುದೇ ಅರ್ಜಿಗಳು ಸ್ವೀಕಾರವಾಗಿಲ್ಲ. ಸೋಮವಾರ ಶಿವಕುಮಾರ್ ಎಂಬುವವರು ನಾಡ ಕಚೇರಿಯಲ್ಲಿ ಶೌಚಗೃಹ, ಕುಡಿಯುವ ನೀರು, ಮೇಲ್ಫಾವಣಿ ದುರಸ್ತಿ ಮಾಡಿಸವಂತೆ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಶಿವಕುಮಾರ್ ಮಾತನಾಡಿ, ಜನರ ಸಮಸ್ಯೆ ಬಗೆಹರಿಸುವುದಿರಲಿ ಮೊದಲು ನಾಡಕಚೇರಿಯ ಅವ್ಯವಸ್ಥೆಯನ್ನು ಸರ್ಕಾರ ಗಮನಿಸಬೇಕು. ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಬರುವ ಅರ್ಜಿದಾರರು ಹಾಗೂ ಇಲ್ಲಿನ ಅಧಿಕಾರಿಗಳಿಗೂ ಶೌಚಗೃಹವಿಲ್ಲ. ವೃದ್ಧರಿಗೆ ಕೂರಲು ಆಸನ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕಟ್ಟಡದ ಮೇಲ್ಫಾವಣಿ ಹಾಳಾಗಿದ್ದು, ಒಳಗಿರುವ ಹಳೆ ದಾಖಲೆಗಳು ಮಳೆ ನೀರಿಗೆ ಕರಗಿ ಹೋಗುತ್ತಿವೆ. ಅಗತ್ಯ ದಾಖಲೆಗಳನ್ನು ಕೇಳಲು ಬಂದರೆ ನಶಿಸಿದೆ ಎಂದು ಹಿಂಬರಹ ನೀಡುತ್ತಾರೆ. ಹಾಗಾಗಿ ಮೊದಲು ನಾಡಕಚೇರಿ ಅವ್ಯವಸ್ಥೆ ಸರಿಪಡಿಸುವಂತೆ ತಿಳಿಸಿದ್ದಾರೆ.
ಕಡೂರು ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ, ತಾಲೂಕಿನಾದ್ಯಂತ ನಾಡಕಚೇರಿಗಳು ಮತ್ತು ಗ್ರಾಪಂಗಳಲ್ಲಿ ಅರ್ಜಿ ಸ್ವೀಕಾರ ಕೇಂದ್ರವನ್ನು ತೆರೆಯಲಾಗಿದೆ. ಬೀರೂರು ನಾಡಕಚೇರಿಯಲ್ಲಿ ಅರ್ಜಿಸ್ವೀಕಾರ ಕೇಂದ್ರ ಆರಂಭವಾಗಿರುವ ಬಗ್ಗೆ ಪ್ರಚಾರಪಡಿಸಲು ಗ್ರಾಮಸಹಾಯಕರಿಗೆ ತಿಳಿಸಲಾಗಿದೆ. ಜನತೆ ನೀಡುವ ಅರ್ಜಿಗಳು ತಹಸೀಲ್ದಾರ್ ಕಚೇರಿಗೆ ಬಂದ ಕೂಡಲೇ ಇಲಾಖಾವಾರು ಅರ್ಜಿಗಳನ್ನು ಬೇರ್ಪಡಿಸಿ ಆಯಾ ಇಲಾಖೆ ಅಧಿಕಾರಿಗಳಿಗೆ ಅರ್ಜಿಗಳನ್ನು ಕಳಿಸಿ ಬಗೆಹರಿಸುವಂತೆ ಸೂಚಿಸಲಾಗುತ್ತದೆ. ಹಾಗೂ ಬೀರೂರು ನಾಡಕಚೇರಿಯ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದಿದ್ದು, ಕಟ್ಟಡದ ಅಭಿವೃದ್ಧಿಗೆ ಅನುದಾನ ಬಂದ ಕೂಡಲೇ ಕಾಮಗಾರಿ ನಡೆಸಲಾಗುವುದು ಎಂದರು.