ಕುಂಬಳೆ ರೈಲು ನಿಲ್ದಾಣದಲ್ಲಿ ಅವ್ಯವಸ್ಥೆ : ಮಳೆ, ಬಿಸಿಲಿಗೆ ಪ್ರಯಾಣಿಕರು ಹೈರಾಣ : ಪ್ಲಾಟ್‌ಫಾರ್ಮ್ ಛಾವಣಿಯಿಲ್ಲದೆ ಸಂಕಷ್ಟ

New Project (5)
Published on

ವಿಜಯವಾಣಿ ಸುದ್ದಿಜಾಲ ಕುಂಬಳೆ

ಹೆದ್ದಾರಿ ಸಂಚಾರ ಹಲವು ಕಾರಣಗಳಿಂದ ದುಸ್ತರವಾದ ಹಂತದಲ್ಲಿ ಇತ್ತೀಚೆಗೆ ಸಾಮಾನ್ಯ ಪ್ರಯಾಣಿಕರ ರೈಲು ಸಂಚಾರ ಅಧಿಕಗೊಂಡಿದ್ದು, ಅನುಕೂಲ ಸಮಯಗಳಲ್ಲಿ ರೈಲುಗಳನ್ನೇ ಆಶ್ರಯಿಸುತ್ತಿರುವುದು ಹೆಚ್ಚಾಗಿದೆ. ಈ ಮಧ್ಯೆ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕಾದದ್ದು ರೈಲ್ವೆ ಇಲಾಖೆಯ ಜವಾಬ್ದಾರಿಯಾಗಿದ್ದರೂ, ವಿವಿಧ ಯೋಜನೆಗಳ ಹೆಸರಲ್ಲಿ ನಿಲ್ದಾಣದ ಅಂದ ಹೆಚ್ಚಿಸುವುದಷ್ಟೇ ಕಂಡುಬರುತ್ತಿದೆಯೇ ಹೊರತು ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಯಾವುದೇ ಅಭಿವೃದ್ಧಿ ಚಟುವಟಿಕೆಗೆ ತೊಡಗಿಸಿಕೊಳ್ಳದಿರುವುದಕ್ಕೆ ಕುಂಬಳೆ ರೈಲು ನಿಲ್ದಾಣ ಉದಾಹರಣೆ.

ಇಲ್ಲಿಯ ರೈಲು ನಿಲ್ದಾಣದಕ್ಕೆ ದಿನನಿತ್ಯ ಆಗಮಿಸುವ ಸಾವಿರಾರು ರೈಲು ಪ್ರಯಾಣಿಕರಿಗೆ ಮಳೆ ಮತ್ತು ಬಿಸಿಲಿನಿಂದಾಗಿ ಸಮಸ್ಯೆ ಎದುರಾಗಿದೆ. ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಛಾವಣಿಗಳಿಲ್ಲದಿರುವುದು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಮತ್ತು ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ರೈಲ್ವೆ ಅಧಿಕಾರಿಗಳು ತೋರಿಸುತ್ತಿರುವ ನಿರ್ಲಕ್ಷ್ಯವನ್ನು ಸ್ಥಳೀಯರು ಮತ್ತು ಸ್ವಯಂಸೇವಾ ಸಂಸ್ಥೆಗಳು ತೀವ್ರವಾಗಿ ಪ್ರತಿಭಟಿಸಿದ್ದರೂ ರೈಲು ಇಲಾಖೆ ಮೌನವಾಗಿದೆ. ಪ್ರಯಾಣಿಕರ ಸಂಘ, ಇತರ ಸಂಘಟನೆಗಳು ಮತ್ತು ಸ್ಥಳೀಯರು ವರ್ಷಗಳಿಂದ ಪ್ಲಾಟ್‌ಫಾರ್ಮ್‌ಗೆ ಛಾವಣಿಗಾಗಿ ಒತ್ತಾಯಿಸುತ್ತಿದ್ದರೂ, ರೈಲ್ವೆ ಅಧಿಕಾರಿಗಳು ಅದನ್ನು ಕಂಡೂ ಕಾಣದಂತೆ ಇದ್ದಾರೆ.

100 ಮೀಟರ್‌ಗಳ ಮೇಲ್ಛಾವಣಿ ಮಾತ್ರ

ಪ್ರಸ್ತುತ, ನಿಲ್ದಾಣದ ಕಚೇರಿ ಇರುವ ಪ್ರದೇಶದಲ್ಲಿ ಪ್ಲಾಟ್‌ಫಾರ್ಮ್‌ನ ಸುಮಾರು 100 ಮೀಟರ್‌ಗಳ ಮೇಲ್ಛಾವಣಿ ಮಾತ್ರ ಇದೆ. ಎರಡನೇ ಪ್ಲಾಟ್‌ಫಾರ್ಮ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಕನಿಷ್ಠ 500 ಮೀಟರ್‌ಗಳ ಮೇಲ್ಛಾವಣಿಯನ್ನು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳು ಮತ್ತು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸಂತ್ರಸ್ತರ ಆರೋಪ. ದೂರದ ರೈಲುಗಳ ನಿಲುಗಡೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದರೂ, ಲಿಫ್ಟ್‌ಗಳು ಮತ್ತು ಬೆಳಕಿನ ವ್ಯವಸ್ಥೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೆಯ ಹಳೆಯ ನೆಪಗಳು ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ನಉಂಟುಮಾಡುತ್ತಿವೆ.

ಛಾವಣಿಯಿಲ್ಲದ ಪ್ಲಾಟ್‌ಫಾರ್ಮ್‌ಗಳು!

ಭಾರೀ ಮಳೆ ಸುರಿಯುವ ಸಂದರ್ಭ ಛಾವಣಿಯಿಲ್ಲದ ಪ್ಲಾಟ್‌ಫಾರ್ಮ್‌ಗಳು ಪ್ರಯಾಣಿಕರಿಗೆ ಸಂಕಷ್ಟಕ್ಕೆ ಕಾರಣವಾಗಿದೆ. ಪ್ರಸ್ತುತ, ಕುಂಬಳೆಯಲ್ಲಿ ಕೆಲವೇ ರೈಲುಗಳಿಗೆ ಮಾತ್ರ ನಿಲುಗಡೆ ಇದೆ. ಈ ರೈಲುಗಳನ್ನು ಹತ್ತುವುದು ಸಹ ಕಷ್ಟಕರವಾಗಿದೆ ಎನ್ನುವುದು ಪ್ರಯಾಣಿಕರ ದೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net