

ಗುಂಡ್ಲುಪೇಟೆ: ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿದ್ದು, ನಿತ್ಯ ಪ್ರಯಾಣಿಕರು ಒಂದಲ್ಲ ಒಂದು ರೀತಿಯಲ್ಲಿ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
198 ರಲ್ಲಿ ಪಟ್ಟಣದಲ್ಲಿ ಆರಂಭವಾದ ಸಾರಿಗೆ ಡಿಪೋ ಜಿಲ್ಲೆಯ ಮೊದಲನೆಯದು ಎಂಬ ಖ್ಯಾತಿಗೆ ಪಾತ್ರವಾಗಿದೆ. 140 ಬಸ್‌ಗಳನ್ನು ಹೊಂದಿದ್ದು ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲದೆ, ಜಿಲ್ಲಾ ಕೇಂದ್ರ, ಮೈಸೂರು, ಬೆಂಗಳೂರು, ಧರ್ಮಸ್ಥಳ, ಹೊರನಾಡು ಮುಂತಾದ ಪ್ರಮುಖ ಪ್ರವಾಸಿ ತಾಣಗಳು ಹಾಗೂ ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿಗೂ ಸಂಚರಿಸುವ ಮೂಲಕ ಗುಂಡ್ಲುಪೇಟೆಯ ಹೆಸರನ್ನು ಎತ್ತರಕ್ಕೇರಿಸಿವೆ. ಆದರೆ ಇತ್ತೀಚೆಗೆ ಘಟಕದಲ್ಲಿ ಬಸ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಈ ನಡುವೆ ಎರಡು ವರ್ಷದ ಹಿಂದೆ ರಾಜ್ಯ ಸರ್ಕಾರ ಶಕ್ತಿ ಯೋಜನೆ ಆರಂಭಿಸಿದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. 50 ಸೀಟ್ ಸಾಮರ್ಥ್ಯದ ಬಸ್‌ಗಳಲ್ಲಿ 120-150 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ನೂರಾರು ಪ್ರಯಾಣಿಕರ ಒತ್ತಡ ತಡೆಯಲಾಗದ ಬಸ್‌ಗಳ ಬಾಗಿಲುಗಳು ಕಿತ್ತು ಹೋಗಿದ್ದರೂ ರಿಪೇರಿಯಾಗಿಲ್ಲ. ಇದರಿಂದ ಸೀಟು ಸಿಗದೆ ನಿಲ್ಲುವ ಪ್ರಯಾಣಿಕರು ಆತಂಕದಿಂದಲೇ ಪ್ರಯಾಣಿಸುವಂ ತಾಗಿದೆ. ಬಸ್‌ಗಳನ್ನು ಕಾಲಕಾಲಕ್ಕೆ ಸರಿಯಾಗಿ ನಿರ್ವಹಣೆ ಇಲ್ಲವಾದ ಪರಿಣಾಮ ಡಿಪೋದಲ್ಲಿರುವ ಬಹುತೇಕ ವಾಹನಗಳು ಗುಜರಿ ಸೇರುವ ಹಂತದಲ್ಲಿವೆ. ಅಲ್ಲದೆ ಪ್ರತಿ ದಿನವೂ ಒಂದಲ್ಲ ಒಂದು ಕಡೆ ಬಸ್‌ಗಳು ಕೆಟ್ಟುನಿಲ್ಲುತ್ತಿವೆ. ನಿಲ್ದಾಣದಿಂದ ಹೊರಟ ಬಸ್ ಎಲ್ಲಿ ನಿಲ್ಲುತ್ತದೆ ಎಂಬುದನ್ನೇ ಅರಿಯದ ಪ್ರಯಾಣಿಕರು ಆತಂಕದಿಂದಲೇ ಪ್ರಯಾಣಿಸುವಂತಾಗಿದೆ. ಮೈಸೂರಿಗೆ ಹೋಗುವ ಬಸ್‌ಗಳು ನೂರಾರು ಪ್ರಯಾಣಿಕರ ಭಾರ ತಾಳಲಾರದೆ ದಾರಿಯಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ತಮ್ಮ ಕೆಲಸ ಕಾರ್ಯಗಳಿಗೆ ಸಕಾಲಕ್ಕೆ ಹೋಗಲಾಗದ ಪ್ರಯಾಣಿಕರು ಸಾರಿಗೆ ಸಂಸ್ಥೆಗೆ ಹಾಗೂ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ನಿರ್ವಹಣೆಯ ಕೊರತೆ, ಬಿಡಿಭಾಗಗಳ ಖರೀದಿಯಿಲ್ಲ: ಡಿಪೋದಲ್ಲಿ 10 ಅನುಭವಿ ಹಾಗೂ ಕಾಯಂ ಫೋರ್‌ಮನ್‌ಗಳ ಸಂಖ್ಯೆ ಕಡಿಮೆಯಿದೆ. 40 ಹೊಸಬರನ್ನು ಹೊರಗುತ್ತಿಗೆ ಆಧಾರದಲ್ಲಿ ನಿಯೋಜಿಸಿಕೊಂಡಿದ್ದರೂ ಬಸ್‌ಗಳಿಗೆ ಅಗತ್ಯವಾದ ಬಿಡಿ ಭಾಗಗಳನ್ನು ಸರಬರಾಜು ಮಾಡುತ್ತಿಲ್ಲ. ಇತ್ತೀಚೆಗೆ ಬಂದಿರುವ ಅಶ್ವಮೇಧ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ಬಸ್‌ಗಳು ಗುಜರಿ ಮಾಲುಗಳಾಗಿವೆ. ಅಲ್ಲದೆ ಈ ಹಿಂದಿನಂತೆ ಚಾಲಕರಿಗೆ ಬಸ್‌ಗಳನ್ನು ಅಲಾಟ್ ಮಾಡುತ್ತಿಲ್ಲ. ಇದರಿಂದ ಡ್ಯೂಟಿ ಮುಗಿಸಿ ಬಂದ ಚಾಲಕರು ಬಸ್‌ಗಳ ಸಮಸ್ಯೆಗಳ ಬಗ್ಗೆ ತಿಳಿಸಿದರೂ ಅವುಗಳನ್ನು ರಿಪೇರಿ ಮಾಡದೆ ಬೇರೆ ಚಾಲಕರಿಗೆ ಕೊಟ್ಟು ಕಳಿಸಲಾಗುತ್ತಿದೆ.
ಕಡಿಮೆ ವೆಚ್ಚ ತೋರಿಸಿ ಹೆಚ್ಚಿನ ಆದಾಯ ಗಳಿಸುವ ಸಲುವಾಗಿ ಬಿಡಿ ಭಾಗಗಳನ್ನು ತರಿಸಿ ಅಳವಡಿಸುವ ಕೆಲಸವಾಗುತ್ತಿಲ್ಲ. ಎಲ್ಲ ಬಸ್‌ಗಳಲ್ಲೂ ಏರ್ ಫಿಲ್ಟರ್, ಬ್ರೇಕ್ ಲೈನರ್, ಡ್ರಂ ಸಮಸ್ಯೆ ಇದ್ದರೂ ಅವುಗಳನ್ನು ರಿಪೇರಿ ಮಾಡಿಸದೆ ಹಾಗೆಯೇ ಲೈನಿಗೆ ಕಳಿಸಲಾಗುತ್ತಿದೆ. ಹಲವು ಬಸ್‌ಗಳಲ್ಲಿ ಸೆಲ್ಫ್ ಮೋಟಾರು ಸಮಸ್ಯೆಯಿದ್ದು ನೂಕಿದರೆ ಮಾತ್ರ ಸ್ಟಾರ್ಟ್ ಆಗುತ್ತವೆ. ಟಯರ್ ಸಂಪೂರ್ಣ ಸವೆದಿದ್ದರೂ ಅವುಗಳನ್ನು ಬದಲಿಸದೆ ರೂಟಿಗೆ ಕಳುಹಿಸಲಾಗುತ್ತಿದೆ. ಏನಾದರೂ ಅನಾಹುತವಾದರೆ ನಮ್ಮನ್ನು ಹೊಣೆ ಮಾಡುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: 7 ವರ್ಷದ ಹಿಂದೆ ಬಸ್ ನಿಲ್ದಾಣದಲ್ಲಿ ದಿ.ಎಚ್.ಎಸ್.ಮಹದೇವಪ್ರಸಾದ್ ಅಭಿಮಾನಿಗಳು ಶುದ್ಧಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು. ಆದರೆ ಸಾರಿಗೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಲ್ಲಿಗೆ ನೀರಿನ ಸರಬರಾಜು ಆಗುತ್ತಿಲ್ಲ. ಇದರಿಂದ ಪ್ರಯಾಣಿಕರು ಬಾಟಲಿ ನೀರು ಖರೀದಿಸಿ ದಾಹ ತಣಿಸಿಕೊಳ್ಳುವಂತಾಗಿದೆ.
ಮಳೆಗಾಲದಲ್ಲಿ ಸೋರುವ ನಿಲ್ದಾಣ: ಸ್ವಲ್ಪ ಮಳೆಬಿದ್ದರೂ ಬಸ್ ನಿಲ್ದಾಣದ ಛಾವಣಿಯಿಂದ ನೀರು ಸೋರುತ್ತದೆ. ಗೋಡೆಗಳ ಬದಿಗಳಲ್ಲಿ ಧಾರಾಕಾರವಾಗಿ ಸುರಿಯುವುದರಿಂದ ಗ್ರಾಮಾಂತರ ಪ್ರದೇಶಕ್ಕೆ ಹೋಗುವ ಬಸ್‌ಗಳಿಗೆ ಕಾಯುವ ಪ್ರಯಾಣಿಕರು ಕುಳಿತುಕೊಳ್ಳಲೂ ಸಾಧ್ಯವಾಗದಂತಾಗಿದ್ದು, ಮಳೆ ನೀರಿನಲ್ಲಿಯೇ ಬಸ್ ಹತ್ತಬೇಕಾದ ಅನಿವಾರ್ಯತೆ ಇದೆ.
ಇಲ್ಲಿನ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿದೆ. ಮೈಸೂರು ಕಡೆಗೆ ಹೋಗುವ ಪ್ರಯಾಣಿಕರು ಬಿಸಿಲಿನಲ್ಲಿಯೇ ನಿಂತು ಬಸ್‌ಗಳಿಗಾಗಿ ಕಾಯಬೇಕಾಗಿದೆ. ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಮಳೆಗಾಲದಲ್ಲಿ ನಿಲ್ದಾಣದೊಳಗೆ ನೀರು ಹರಿದು ಬಂದು ಕೆರೆಯಂತಾಗುತ್ತಿದೆ. ಛಾವಣಿಯಲ್ಲಿ ನೀರು ಸೋರುವುದರಿಂದ ನಿಲ್ದಾಣದೊಳಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ.
ಪಾಂಡು ಪ್ರಯಾಣಿಕ
ಡಿಪೋಗೆ ಮಂಜೂರಾಗಿರುವ ಮೆಕ್ಯಾನಿಕಲ್ ಹುದ್ದೆಗಳು ಸಂಪೂರ್ಣ ಭರ್ತಿಯಾಗಿದೆ. ಎಲ್ಲ ಬಸ್‌ಗಳ ಸಮಸ್ಯೆಗಳನ್ನು ಅಟೆಂಡ್ ಮಾಡಲಾಗುತ್ತಿದೆ. ಮಳೆನೀರು ಹೊರಗೆ ಹೋಗಲು ವ್ಯವಸ್ಥೆ ಮಾಡಿದ್ದರೂ ಹೊರಗಿನ ನೀರು ಬರುವುದರಿಂದ ತೊಂದರೆಯಾಗುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು.
ತ್ಯಾಜರಾಜು,
ಡಿಪೋ ಮ್ಯಾನೇಜರ್ ಗುಂಡ್ಲುಪೇಟೆ