

ಕೆ.ಆರ್.ಪೇಟೆ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿ ದೇಶದ ಜನರ ಮೆಚ್ಚುಗೆಗೆ ಪಾತ್ರರಾದ ಭಾರತೀಯ ಸೈನಿಕರಿಗೆ ಶುಭಕೋರಿ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ಆವರಣದಲ್ಲಿ ವಿಷ್ಣು ಸಹಸ್ರನಾಮ ಪಠಣ ನಡೆಯಿತು.
ಹೊಯ್ಸಳ ಶಿಲ್ಪಕಲೆಯ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇಗುಲಕ್ಕೆ ಆಗಮಿಸಿದ ಹೊಸಹೊಳಲಿನ ನೂರಾರು ಭಕ್ತರು ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಹಿಂದು ಸಮುದಾಯದ ಮೇಲೆ ದಾಳಿ ನಡೆಸಿ ಹಿಂದು ಮಹಿಳೆಯರ ಸಿಂಧೂರ ಅಳಿಸಿದ ಪಾತಕಿಗಳಿಗೆ ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಮುಟ್ಟಿ ನೋಡಿಕೊಳ್ಳುವ ಪೆಟ್ಟು ನೀಡಿದ್ದಾರೆ. ಭಯೋತ್ಪಾದನೆಯನ್ನು ರಾಷ್ಟ್ರ ಧರ್ಮವನ್ನಾಗಿಸಿಕೊಂಡಿರುವ ಪಾಕಿಸ್ತಾನಕ್ಕೆ ನಮ್ಮ ಕೆಚ್ಚೆದೆಯ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ದೇಶ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸೈನಿಕರು ಮತ್ತು ಸೈನಿಕರ ಕುಟುಂಬಗಳಿಗೆ ಒಳಿತಾಗಬೇಕು. ನಮ್ಮ ದೇಶದ ಸೈನಿಕರಿಗೆ, ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮತ್ತು ಅವರ ತಂಡಕ್ಕೆ ಹಾಗೂ ಭಾರತದ ಎಲ್ಲ ಪ್ರಜೆಗಳಿಗೂ ಭಗವಂತನ ರಕ್ಷಾಕವಚ ದೊರಕಲಿ ಎಂಬ ಸಂಕಲ್ಪದೊಡನೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣವನ್ನು ನಡೆಸಲಾಯಿತು. ದೇಶ ಸೇವೆ ಮಾಡುತ್ತಿರುವ ಪ್ರಧಾನ ಮಂತ್ರಿಗಳು ಹಾಗೂ ಸೈನಿಕರಿಗೆ ಎಂದೆಂದಿಗೂ ಜಯ ಸಿಗಲಿ ಎಂದು ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿನಯ್ ಗುರುಗಳು, ರಾಜಭಟ್ಟರು, ಸುನಿತಾ ನಂದಕುಮಾರ್, ಶಾರದಾ ಸುಬ್ರಮಣ್ಯ, ರೇಖಾ ರವಿ, ಪುನೀತ್, ಎಚ್.ಡಿ. ರವಿ, ಬಾಲಕೃಷ್ಣ, ರಾಘು ಸೇರಿದಂತೆ ಅನೇಕರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಲೋಕ ಕಲ್ಯಾಣಕ್ಕೆ ಪ್ರಾರ್ಥನೆ ಸಲ್ಲಿಸಿದರು.