ಜಿಲ್ಲೆಯೆಲ್ಲೆಡೆ ಲಂಬೋಧರನ ಜಪ

FotoJet 111
Published on

ಗಮನ ಸೆಳೆದ ವಿವಿಧ ಭಂಗಿಯ ವಿನಾಯಕನ ಮೂರ್ತಿಗಳು

ಕೋಲಾರ :ನಗರ ಸೇರಿ ಗ್ರಾಮೀಣ ಭಾಗದಲ್ಲೂ ಗಣೇಶ ಚತುರ್ಥಿ ಹಬ್ಬ ಕಳೆಗಟ್ಟಿತ್ತು. ಯುವಕರು ಹಾಗೂ ಗಣೇಶ ಸಮಿತಿಗಳಿಂದ ಬೀದಿ ಬೀದಿಗಳಲ್ಲಿ, ದೇವಾಲಯಗಳಲ್ಲಿ ಬುಧವಾರ ವ್ನಿಶ್ವರನ ಮೂರ್ತಿ ಪ್ರತಿಷ್ಠಾಪಿತಿಸಿ ಪೂಜೆ ಸಲ್ಲಿಸಿದರು.

ನಗರದಲ್ಲಿ ಬಾಲಗಂಗಾಧರ ತಿಲಕ್​ ವಿನಾಯಕ ವಿಸರ್ಜನಾ ಸಮಿತಿ, ಜಿಲ್ಲಾಸ್ಪತ್ರೆ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಸಭಾ, ಶ್ರೀ ವಿದ್ಯಾ ವಿನಾಯಕ ಗೆಳೆಯರ ಬಳಗ ಸೇರಿ ವಿವಿಧ ಸಮಿತಿಗಳ ವತಿಯಿಂದ ಶಾಶ್ವತ ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ 11ನೇ ವರ್ಷದ ಅದ್ದೂರಿ ಗಣೇಶೋತ್ಸವದ ವಿಶೇಷ ಪೂಜೆ ನಡೆಸಲಾಯಿತು.

ಈ ಬಾರಿ ಕುದುರೆ ಸಾರೋಟ್​ನಲ್ಲಿ ಕುಳಿತ ಗಣಪನ ಬೃಹತ್​ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ನೋಡಲು ಹರಿದು ಬಂದ ಜನಸಾಗರಕ್ಕೆ ಇಡೀ ದಿನ ಪ್ರಸಾದ ವಿತರಿಸಲಾಯಿತು. ಬಜರಂಗದಳ ಯುವಕರು, ಬಾಲಗಂಗಾಧರ ತಿಲಕ್​ ವಿನಾಯಕ ವಿಸರ್ಜನಾ ಸಮಿತಿ ನೇತೃತ್ವದಲ್ಲಿ ನಗರದ ಗಾಂಧಿವನದಲ್ಲಿ ಧರ್ಮರಕ್ಷಣೆ, ಸೌಹಾರ್ದತೆಯ ತಿರುಮಲ ಬಾಲಾಜಿ ಗಣಪನ ಬೃಹತ್​ ಮೂರ್ತಿಯನ್ನಿಟ್ಟು, ಜತೆಯಲ್ಲಿ ಒಂದು ಕಡೆ ನೃತ್ಯ ಗಣಪ, ಮತ್ತೊಂದುಕಡೆ ಸಿಂಹಾಸನಾರೂಢ ಗಣಪನನ್ನಿಟ್ಟು ಪೂಜಿಸಿದರು.

ಇಡೀ ನಗರ ಮತ್ತು ವಿವಿಧೆಡೆಗಳಲ್ಲಿ ಪ್ರತಿಷ್ಠಾಪಿಸಿರುವ ವಕ್ರತುಂಡನ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಅ.30ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶನ ಮೂರ್ತಿಗಳನ್ನು ನಗರ ಕೋಲಾರಮ್ಮ ಅಮಾನಿ ಕೆರೆಯಲ್ಲಿ ನಗರಸಭೆಯಿಂದ ವ್ಯವಸ್ಥೆ ಮಾಡಲಾಗಿರುವ ಹೊಂಡದಲ್ಲಿ ವಿಸರ್ಜನೆ ಮಾಡಿದ್ದು ಕಂಡು ಬಂದಿತು.

ಕಿಲಾರಿಪೇಟೆಯಲ್ಲಿ ಕೃಷ್ಣವೇಷಧಾರಿ ಕೊಳಲು ಹಿಡಿದ ಗಣಪನನ್ನು ಪ್ರತಿಷ್ಠಾಪಿಸಲಾಗಿತ್ತು. ಧರ್ಮರಾಯನಗರದಲ್ಲಿ ಅಯ್ಯಪ್ಪಸ್ವಾಮಿ ಗಣಪನನ್ನು ಇಟ್ಟಿದ್ದು, ನಗರದಲ್ಲಿ ಕಮಲದ ಮೇಲೆ ನಿಂತ ನಾಟ್ಯ ಗಣಪ, ಗೋಲ್ಡನ್​ ಗಣಪ, ಕೈಲಾಸಹೊತ್ತ ಏಕದಂತ, ಎಂಜಿ ರಸ್ತೆಯಲ್ಲಿ ಧರ್ಮಸ್ಥಳ ಶ್ರೀೇತ್ರ ಮಹಾದ್ವಾರ ಒಳಗೊಂಡಿದ್ದ ಮಂಟಪದಲ್ಲಿ ಬೃಹತ್​ ಗಾತ್ರದ ಗೌರಿಸುತ ಮೂರ್ತಿ, ಶ್ರೀನಿವಾಸರೂಪಿ ವಿನಾಯಕ, ಅಯ್ಯಪ್ಪಸ್ವಾಮಿಯ ವಿಶ್ನೇಶ್ವರ ಸೇರಿ ವಿವಿಧ ರೂಪಗಳಲ್ಲಿ ನಗರದ ಪ್ರತಿ ಬಡಾವಣೆಯಲ್ಲೂ ದೇವರನ್ನು ಪ್ರತಿಷ್ಠಾಪಿಸಲಾಗಿದ್ದು, ಎಲ್ಲ ಕಡೆಗಳಲ್ಲೂ ಮಹಾಗಣಪತಿಯ ಮೂರ್ತಿಗಳು ವೈವಿಧ್ಯತೆಯಿಂದ ಗಮನ ಸೆಳೆಯುತ್ತಿವೆ.

ಕಡುಬು ಏಕದಂತ :  ನಗರದ ಕೋಟೆಯ ಲ್ಮ ಗಣಪತಿ ದೇವಾಲಯದಲ್ಲಿನ ಕಡುಬುಗಳಿಂದ ಈಶ ಪುತ್ರನನ್ನು ಅಲಂಕರಿಸಿದ್ದು, ವಿಶಿಷ್ಟ ರೀತಿಯಲ್ಲಿ ಪೂಜಾ ಕಾರ್ಯಕ್ರಮಗಳು ಮಾಡಲಾಯಿತು. ಕರಿಕಡುಬಿನಲ್ಲೇ ಮಂಗಳಮೂರ್ತಿ ಅಲಂಕರಿಸಲಾಗಿದೆ. ಇದನ್ನು ನೋಡಲು ನಗರದ ವಿವಿಧ ಬಡಾವಣೆಗಳಿಂದ ಸಾವಿರಾರು ಮಂದಿ ಆಗಮಿಸಿ ದರ್ಶನ ಪಡೆದರು.

ವಿಸರ್ಜನೆಗೆ ಹೊಂಡ ನಿರ್ಮಾಣ : ಗೌರಿಸುತನ ವಿಸರ್ಜನೆಗೆ ನಗರಸಭೆಯಿಂದ ಕೋಲಾರಮ್ಮ ಕೆರೆಯಲ್ಲಿ ನಿರ್ಮಿಸಿರುವ ಬೃಹತ್​ ನೀರಿನ ಹೊಂಡದಲ್ಲಿ ವ್ಯವಸ್ಥೆ ಕಲ್ಪಿಸಿದ್ದು, ಬೃಹತ್​ ಬಾಲಚಂದ್ರನ ಮೂರ್ತಿಗಳ ವಿಸರ್ಜನೆಗೆ ಕ್ರೇನ್​ ವ್ಯವಸ್ಥೆ ಮಾಡಲಾಗಿದೆ.

ವರುಷ ತೊಡಕು : ಶ್ರಾವಣ ಮಾಸದ ನಂತರ ಬಂದ ಮೊದಲ ಹಬ್ಬವಾದ ಗಣೇಶ ಚತುರ್ಥಿ ಆಚರಣೆಯು ಬುಧವಾರ ಮುಗಿದ ನಂತರ ಗುರುವಾರ ವರುಷ ತೊಡು ಆಚರಣೆ ನಡೆಯಿತು. ಒಂದು ತಿಂಗಳಿಂದ ಶ್ರವಣ ಆಚರಣೆಯಲ್ಲಿದ್ದ ಸಾರ್ವಜನಿಕರು ಮಾಂಸದೂಟದಿಂದ ದೂರ ಉಳಿದಿದ್ದರು. ಹಬ್ಬದ ಮರುದಿನ ಎಲ್ಲಿ ನೋಡಿದರೂ ಮಾಂಸದ ಖ್ಯಾದ್ಯಗಳ ಮಲು ಜೋರಾಗಿಯೇ ಇತ್ತು. ಆದರೆ ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಬಿಸಿಯು ತಟ್ಟಿದ್ದು, ಕುರಿ ಮಾಂಸ ಕೆಜಿ 700ರಿಂದ 750ರೂ. ಇತ್ತು. ಬಾಯ್ಲರ್​ ಕೋಳಿ 200ರಿಂದ 220 ರೂ., ನಾಟಿ ಕೋಳಿ 550ರಿಂದ 600 ರೂ. ವಿವಿಧ ತಳಿಯ ಮೀನುಗಳ ದರವು ಏರಿಕೆಯಾಗಿತ್ತು. ಗ್ರಾಮೀಣ ಭಾಗದಲ್ಲಿ ಗುಂಡೆ ಮಾಂಸಕ್ಕೆ ಹೆಚ್ಚು ಬೇಡಿಕೆಯಿತ್ತು. ಸಾರ್ವಜನಿಕರು ಮಾಂಸ ಖರೀದಿಗಾಗಿ ಅಂಗಡಿಗಳ ಮುಂದೆ ಮುಗಿ ಬಿದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net