ದೇವರಲ್ಲಿ ಮನಸು ಕೇಂದ್ರೀಕರಿಸಲು ಬೇಕು ಜಪ

12sirsi2
Published on

ಶಿರಸಿ: ನಮ್ಮ ಮನಸನ್ನು ದೇವರಲ್ಲಿ ನಿಲ್ಲಿಸುವ ಹಾಗೆ ಆಗಬೇಕು. ಅದರ ಭಾಗವೇ ಜಪ ಮತ್ತು ಪೂಜೆಗಳಾಗಿವೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಅವರ ಚಾತುರ್ವಸ್ಯದ ಅಂಗವಾಗಿ ಹಳವಳ್ಳಿ, ಹಿಲ್ಲೂರು, ಕೊಡ್ಲಗದ್ದೆ ಭಾಗದ ಶಿಷ್ಯ ಭಕ್ತರು ಸಲ್ಲಿಸಿದ ಸೇವೆ ಸ್ವೀಕರಿಸಿ ಅವರು ಮಾತನಾಡಿದರು.

ಮನಸು ತುಂಬ ಚಂಚಲ, ಅಂತಹ ಮನಸನ್ನು ನಿಶ್ಚಲವಾಗಿಸಿ ದೇವರಲ್ಲಿ ನಿಲ್ಲಿಸುವುದು ಬಹಳ ದೊಡ್ಡ ಕೆಲಸ. ನಮಗೆ ಜೀವನದಲ್ಲಿ ನೆಮ್ಮದಿ, ಸದ್ಗತಿ, ಮೋಕ್ಷ ಬೇಕು. ಇವೆಲ್ಲದಕ್ಕೂ ದೇವರಲ್ಲಿ ಮನಸನ್ನು ನಿಲ್ಲಿಸುವಿಕೆ ಅಗತ್ಯ. ದೇವರಲ್ಲಿ ಮನಸನ್ನು ನಿಲ್ಲಿಸಲು ನಮ್ಮಲ್ಲಿ ನಾಲ್ಕು ರೀತಿಗಳಿವೆ. ಧ್ಯಾನ, ಜಪ, ಸ್ತೋತ್ರ ಮತ್ತು ಪೂಜೆ. ಇವುಗಳನ್ನು ತಿಳಿದುಕೊಂಡು ಅನುಷ್ಠಾನ ಮಾಡಬೇಕು. ಇದನ್ನು ತಿಳಿದು ಅನುಷ್ಠಾನ ಮಾಡಿದರೆ ನಮ್ಮ ಪ್ರಾಚೀನ ಪರಂಪರೆಯ ಸಾರವನ್ನು ಗ್ರಹಿಸಿದ ಹಾಗೆ ಆಗುತ್ತದೆ. ಉತ್ತಮವಾದ ಪ್ರಕಾರ ಎಂದರೆ ಧ್ಯಾನ. ದೇವರಲ್ಲಿ ಮನಸನ್ನು ನಿಲ್ಲಿಸಲು ಉತ್ತಮವಾದ ರೀತಿ ಧ್ಯಾನ. ಧ್ಯಾನ ಎಂದರೆ ಏಕಾಗ್ರತೆಯ ಚಿಂತನೆ. ನಮ್ಮ ಹೃದಯದಲ್ಲಿ ದೇವರಿದ್ದಾನೆ. ಹೃದಯದಲ್ಲಿ ದೇವರನ್ನು ಭಾವಿಸಿಕೊಂಡು ಏಕಾಗ್ರತೆಯಿಂದ ನಮ್ಮ ಮನಸನ್ನು ದೇವರಲ್ಲಿ ನಿಲ್ಲಿಸಬೇಕು, ಇದೇ ಧ್ಯಾನ ಎಂದರು.

ಜಪ ಕೂಡ ದೇವರಲ್ಲಿ ಮನಸು ನಿಲ್ಲುವಂತೆ ಮಾಡುವ ಸರಳ ಮಾರ್ಗ. ಮಂತ್ರದ ಮೂಲಕ ದೇವರ ಚಿಂತನೆಯೇ ಜಪ. ಜಪದ ಮಂತ್ರ ಅತ್ಯಂತ ಮುಖ್ಯ. ದೇವರ ಪ್ರತಿ ನಾಮ ಕೂಡ ಮಂತ್ರವೇ. ಮಂತ್ರಗಳು ನಮ್ಮನ್ನು ಸರ್ವವಿಧದಲ್ಲಿ ರಕ್ಷಣೆ ಮಾಡುತ್ತದೆ. ಮಂತ್ರಗಳನ್ನು ಹೇಳುತ್ತಾ, ದೇವರಲ್ಲಿ ಮನಸನ್ನಿಡುತ್ತಾ, ಜಪಕ್ಕೆ ಕುಳಿತುಕೊಳ್ಳಬೇಕು. ಆಗ ಅದು ಉಪಾಸನೆಯಾಗುತ್ತದೆ. ಜಪ ಮತ್ತು ಮನಸಿಗೆ ಒಂದು ತಾದಾತ್ಮ್ಯ ಸಂಬಂಧವಿದೆ ಎಂದರು.

ಲಯ ಅಂದರೆ ಸಮಾಧಿ ಸ್ಥಿತಿ. ಧ್ಯಾನ ಮಾಡುತ್ತಿದ್ದರೆ ನಾನು ಧ್ಯಾನ ಮಾಡುತ್ತಿದ್ದೇನೆ ಎಂಬ ಸ್ಥಿತಿ ನೆನಪಿನಲ್ಲಿ ಇರುವುದಿಲ್ಲ. ಕೇವಲ ಧ್ಯೇಯವಾದ ದೇವರು ಮಾತ್ರ ಅವನಿಗೆ ಕಾಣುತ್ತದೆ. ನಾನು ಎಂಬುದೇ ಮರೆಯುತ್ತದೆ. ದೇವರು ಮಾತ್ರ ಕಾಣುತ್ತಿರುತ್ತದೆ. ನಾನು ಎಂಬುದನ್ನು ಮರೆಯುವುದೇ ಲಯ. ಶ್ರೀ ಮಠದಲ್ಲಿ ಈ ರೀತಿಯಾದ ಜಪ , ಸ್ತೋತ್ರ, ಪೂಜೆಗಳನ್ನು ನಿಮ್ಮಿಂದ ಮಾಡಿಸುವ ರೂಢಿ ತರಲಾಗಿದೆ. ಇದನ್ನು ನಿತ್ಯವೂ ನಿಮ್ಮ ಮನೆಗಳಲ್ಲಿ ಮುಂದುವರಿಸಿಕೊಂಡು ಹೋಗಬೇಕು ಎಂದರು.

ಇದೇ ಸಂದರ್ಭದಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ 95 ಕ್ಕೂ ಹೆಚ್ಚು ಪ್ರತಿಶತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಶ್ರೀಗಳು ನೀಡಿದರು. ಮಹನೀಯರು ಗಾಯತ್ರೀ ಜಪಾನುಷ್ಠಾನ, ಮಾತೆಯರು ಶ್ರೀ ಶಂಕರಸ್ತೋತ್ರ ಪಠಣ, ಲಲಿತಾ ಸಹಸ್ರನಾಮದಿಂದ ಕುಂಕುಮಾರ್ಚನೆ ಮಾಡಿದರು.

ಸೀಮಾ ಅಧ್ಯಕ್ಷ ರಾಜೇಶ ಹೆಗಡೆ ಮತ್ತು ರಾಮಚಂದ್ರ ಹೆಗಡೆ, ನಾಗಪ್ಪ ಭಟ್, ಗೋವಿಂದ ಹೆಗಡೆ, ನರಸಿಂಹ ಭಟ್, ಶ್ರೀಕೃಷ್ಣ ಭಟ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net