ಶಾಂತಿ ಮಂತ್ರ ಪಠಿಸಿದರು, ಸರ್ವರೂ ಎಚ್ಚರದಿಂದಿರಬೇಕು ಪರಾಕ್…

BIRUR karnika
ಬೀರೂರಿನ ಮಹಾನವಮಿ ಬಯಲಿನಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ಮಹೋತ್ಸವ ನಡೆಯಿತು.
Published on

ಬೀರೂರು: ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಸುರರು-ಅಸುರರು ಕಾದಾಡಿದರು, ಭಕ್ತ ಕೋಟಿಗೆ ಮಂಗಳವಾಯಿತು, ಶಾಂತಿ ಮಂತ್ರ ಪಠಿಸಿದರು, ಸರ್ವರೂ ಎಚ್ಚರದಿಂದಿರಬೇಕು ಪರಾಕ್…

ಇದು ಬೀರೂರಿನ ಸರಸ್ವತಿಪುರಂ ಬಡಾವಣೆಯ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ಮಹೋತ್ಸವದ ಕಾರ್ಣಿಕ ನುಡಿಗಳು.
ಬುಧವಾರ ಮುಂಜಾನೆ 4.53ಕ್ಕೆ ಕಾರ್ಣಿಕ ನುಡಿಯಲಾಯಿತು. ದಸರಾ ಅಂಗವಾಗಿ ಭಾನುವಾರದಿಂದಲೇ ಗಂಗಾಪೂಜೆ, ರುದ್ರಾಭಿಷೇಕ, ಗಣಹೋಮ, ಪ್ರಧಾನ ಮಲ್ಲಾರಿ ಹೋಮ, ಮಹಾಮಂಗಳಾರತಿ ನಡೆಸಿ ಶ್ರೀ ಮೈಲಾರಲಿಂಗಸ್ವಾಮಿಯನ್ನು ಪಟ್ಟಕ್ಕೆ ಕೂರಿಸಲಾಗಿತ್ತು. ಸೋಮವಾರ ಆಯುಧ ಪೂಜೆ ಪ್ರಯುಕ್ತ ಹೂವಿನ ಅಲಂಕಾರ, ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗಿಸಲಾಗಿತ್ತು. ಮಂಗಳವಾರ ರಾತ್ರಿ ಪುಷ್ಪಾಲಂಕಾರದೊಂದಿಗೆ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಪಟ್ಟಣ ಸಮೀಪದ ಗಾಳೀಹಳ್ಳಿ ಕೆರೆಯ ಪಾದದಕೆರೆ ಹತ್ತಿರ ತೆಗೆದುಕೊಂಡು ಹೋಗಿ ಬನ್ನಿ ಪತ್ರೆ ಮುಡಿಸಲಾಯಿತು. 101 ಗಣಂಗಳ ಪೂಜೆ, ಮಹಾಮಂಗಳಾರತಿ ನೆರವೇರಿಸಿದ ನಂತರ ಅಲಂಕೃತ ಬಸವನ ಹಾದಿಯಲ್ಲಿ ಗೊರವಯ್ಯನವರ ಢಮರುಗದ ಸದ್ದು, ಮಂಗಳವಾದ್ಯಗಳೊಂದಿಗೆ ಮಹಾನವಮಿ ಬಯಲಿಗೆ ಕರೆತರಲಾಯಿತು. ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ವೀರಭದ್ರಸ್ವಾಮಿ, ಶ್ರೀ ಹುಲ್ಲುಬೆಂಕಿ ಬೀರಲಿಂಗೇಶ್ವರಸ್ವಾಮಿ, ಶ್ರೀ ಹಿರಿಯಂಗಳ ವೀರಭದ್ರಸ್ವಾಮಿ ಮತ್ತು ಮಿತ್ರ ಸಮಾಜದ ಗಣಪತಿ ದೇವರನ್ನು ಮೂರು ಬಾರಿ ಪ್ರದಕ್ಷಿಣೆ ಮಾಡಿ ಬಿಲ್ಲಪ್ಪನನ್ನು ನಿಲ್ಲಿಸಿದರು.
ಮೂರು ದಿನಗಳಿಂದ ವ್ರತದಲ್ಲಿದ್ದ ದಶರಥ ಪೂಜಾರ್ ಅವರು ದೊಡ್ಡಬಿಲ್ಲಪ್ಪನನ್ನು ಏರಿ ನುಡಿಸಿದ ಗಂಟೆ ಸದ್ದಿಗೆ ಸ್ಥಳದಲ್ಲಿ ನೀರವ ಮೌನ ಆವರಿಸಿತು. 4.53ಕ್ಕೆ ಬಾಣವನ್ನು ಹಿಡಿದು ತೂಗಿ ಕೈಬಿಟ್ಟ ಬಳಿಕ ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಸುರರು ಅಸುರರು ಕಾದಾಡಿದರು, ಭಕ್ತ ಕೋಟಿಗೆ ಎಂದು ನುಡಿದು ಒಂದು ನಿಮಿಷಕ್ಕೂ ಅಧಿಕ ಕಾಲ ಮೌನಕ್ಕೆ ಜಾರಿತು. ನಂತರ ಮಂಗಳವಾಯಿತು ಎಂದು ನುಡಿಯಿತು. ಶಾಂತಿಯ ಮಂತ್ರ ಪಠಿಸಿದರು, ಸರ್ವರೂ ಎಚ್ಚರದಿಂದಿರಬೇಕು ಪರಾಕ್ ಎಂದು ಬಿಲ್ಲಪ್ಪನಿಂದ ಜಾರಿದರು. ಕೂಡಲೇ ಭಕ್ತರು ಹರ್ಷೋದ್ಗಾರದಿಂದ ಏಳುಕೋಟಿ ಏಳುಕೋಟಿ ಚಾಂಗಮಲೋ ಎಂದು ಜಯಘೋಷ ಮೊಳಗಿಸಿದರು.
ದೊಡ್ಡಬಿಲ್ಲಪ್ಪ ಮತ್ತು ದಶರಥ ಪೂಜಾರ್ ಅವರನ್ನು ಮೆರವಣಿಗೆಯಲ್ಲಿ ಶ್ರೀ ಮೈಲಾರಲಿಂಗಸ್ವಾಮಿ ಸನ್ನಿಧಿಗೆ ಕರೆದೊಯ್ದ ಬಳಿಕ ಸಿಡಿಮದ್ದು ಸಿಡಿಸಿದರು. ನಂತರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಗುರಿಕಾರರು ಬಾಣದಿಂದ ಅಂಬು ಛೇದಿಸಿದರು.
ಭವಿಷ್ಯವಾಣಿ ನುಡಿಯುವ ಸಂದರ್ಭದಲ್ಲಿ ದೊಡ್ಡಬಿಲ್ಲಪ್ಪನನ್ನು ಏರಿದ ಕೂಡಲೇ ಭಕ್ತರು ಮೊಬೈಲ್‌ಗಳಲ್ಲಿ ವೀಡಿಯೋ ಚಿತ್ರೀಕರಣ ಹಾಗೂ ಸೆಲ್ಫಿಗೆ ಮುಗಿಬಿದ್ದದ್ದರು. ಸ್ವಾಮಿ ಸನ್ನಿಧಿಯಲ್ಲಿ ದೋಣಿ ಸೇವೆ ನಂತರ ಅನ್ನಸಂತರ್ಪಣೆ, ಮನರಂಜನೆ ಕಾರ್ಯಕ್ರಮ ನಡೆಯಿತು. ಅ.26ರಂದು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯವರನ್ನು ಪಟ್ಟಣದ ಬೀದಿಗಳಲ್ಲಿ ಉತ್ಸವ ನಡೆಸಲಾಗುವುದು.
ಕಾರ್ಣಿಕದ ನುಡಿಮುತ್ತುಗಳನ್ನು ಭಕ್ತರು ಹೀಗೆ ವ್ಯಾಖ್ಯಾನಿಸಿಕೊಂಡಿದ್ದಾರೆ. ಸುರರು ಅಸುರರು ಕಾದಾಡಿದರು ಎನ್ನುವ ವಾಕ್ಯಕ್ಕೆ ರಾಜಕೀಯ ಮತ್ತು ರಣರಂಗವಾಗಿರುವ ದೇಶಗಳಲ್ಲಿ ಧರ್ಮ ಮತ್ತು ಅಧರ್ಮಕ್ಕೆ ಕಾದಾಟ ಎನ್ನುವುದಾದರೆ, ಭಕ್ತ ಕೋಟಿಗೆ ಮಂಗಳವಾಯಿತು ಎನ್ನುವುದಕ್ಕೆ ಒಳ್ಳೆಯದನ್ನು ಬಯಸುವವರಿಗೆ ಮಂಗಳಕರ ಹಾಗೂ ಶಾಂತಿ ಮಂತ್ರ ಪಠಿಸಿದರು ಎನ್ನುವುದಕ್ಕೆ ರಾಜಕೀಯದ ಏರುಪೇರು ಮತ್ತು ರಣರಂಗವಾಗಿರುವ ದೇಶಗಳಲ್ಲಿ ಶಾಂತಿ ನೆಲೆಸುವುದು ಎನ್ನುವ ಸಂದೇಶ ಬೀರುತ್ತದೆ ಎಂಬ ಅಭಿಪ್ರಾಯಪಡುತ್ತಿದ್ದಾರೆ ಎಂದು ದೇವಸ್ಥಾನದ ಅಧ್ಯಕ್ಷ ಎಂ.ಪಿ.ವಿಶ್ವೇಶ್ವರಾಚಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net