

ಹೊನ್ನಾವರ: ರಾಮಕ್ಷತ್ರಿಯ ಸೀಮಾ ಪರಿಷತ್ ನೇತೃತ್ವದಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ. 95 ಅಂಕ ಮತ್ತು ಪಿಯುಸಿಯಲ್ಲಿ ಶೇ. 90 ಅಂಕ ಗಳಿಸಿದ 58 ರಾಮಕ್ಷತ್ರಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಜರುಗಿತು.
ಪ್ರತಿಭಾ ಪುರಸ್ಕಾರ ನೆರವೇರಿಸಿದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಅಂಕ ಗಳಿಕೆಯ ಜತೆಗೆ ಸಂಸ್ಕಾರವಂತರಾಗಬೇಕು. ಶಿಕ್ಷಣವೇ ಬೇರೆ, ಸಂಸ್ಕಾರವೇ ಬೇರೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ಉನ್ನತ ಹುದ್ದೆ ಏರಿದರು ತಮ್ಮ ಏಳಿಗೆಗೆ ಕಾರಣೀಕರ್ತರಾದ ಪಾಲಕರು ಮತ್ತು ಗುರು ಹಿರಿಯರನ್ನು ಮರೆಯಬಾರದು. ಸಮಾಜದ ವಿದ್ಯಾರ್ಥಿಗಳು ಪ್ರತಿನಿತ್ಯ ರಾಮರಕ್ಷಾ ಸ್ತೋತ್ರ ಮತು ್ತ ಭಗದ್ಗೀತೆ ಪಠಣ ಮಾಡುವ ಮೂಲಕ ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡು ಸಮಾಜದ ಮತ್ತು ದೇಶದ ಆಸ್ತಿಯಾಗಿ ಹೊರ-ಹೊಮ್ಮಬೇಕು ಎಂದರು.
ರಾಮಕ್ಷತ್ರಿಯ ಪರಿಷತ್ ಅಧ್ಯಕ್ಷ ಎಸ್.ಕೆ. ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ ಸಾಳೇಹಿತ್ತಲ್ ವಿದ್ಯಾರ್ಥಿಗಳ ಯಾದಿ ಪ್ರಸ್ತುತಪಡಿಸಿದರು. ಶ್ರೀ ಮಠದ ಕಾರ್ಯಾಧ್ಯಕ್ಷ ವಿ.ಎನ್. ಹೆಗಡೆ, ಪರಿಷತ್ ಸದಸ್ಯ ಕರ್ನಲ್ ಪಿ.ಎಂ. ನಾಯ್ಕ, ಎಂ.ಆರ್. ನಾಯ್ಕ, ದಾಮೋದರ ನಾಯ್ಕ ಹಳದೀಪುರ, ಸೀತಾರಾಮ ನಾಯ್ಕ ಹಳದೀಪುರ, ನಾರಾಯಣ ನಾಯ್ಕ ಹೊಸಪಟ್ಟಣ, ಉಲ್ಲಾಸ ನಾಯ್ಕ ಮಿರ್ಜಾನ್, ಅಣ್ಣಪ್ಪ ನಾಯ್ಕ ಮಂಕಿ, ಸುಬ್ರಾಯ ನಾಯ್ಕ ಮಂಕಿ, ಇತರರಿದ್ದರು.