ಮಳೆ ನೀರಿನಿಂದ ಕುಂಟೆಯಾದ ರಸ್ತೆ

chanraypatna road problem
chanraypatna road problem
Published on

ಶಾಸಕರ ಅನುದಾನಕ್ಕೆ ಆಗ್ರಹ ಪರಿಹಾರಕ್ಕಾಗಿ ಗ್ರಾಮಸ್ಥರ ಪಟ್ಟು

ವಿಜಯವಾಣಿ ಸುದ್ದಿ ಜಾಲ ಚನ್ನರಾಯಪಟ್ಟಣ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ದೇವನಾಯಕನಹಳ್ಳಿಯಿಂದ ಸೋಮತ್ತನಹಳ್ಳಿಗೆ ಹೋಗುವ ರಸ್ತೆ ಮಳೆ ಬಂದರೆ ನೀರು ನಿಂತು ಕುಂಟೆಯಾಗುವುದರಿಂದ ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಗ್ರಾಮೀಣ ರಸ್ತೆಗಳು ಇಂದಿಗೂ ಸಮಸ್ಯೆಯಾಗಿಯೇ ಉಳಿದಿವೆ. ಸರ್ಕಾರದಿಂದ ಪ್ರತಿ ವರ್ಷ ಹಣ ಮಂಜೂರಾಗುತ್ತಲೇ ಇದ್ದರೂ ಹಳ್ಳಿ ರಸ್ತೆಯ ಸಮಸ್ಯೆಗೆ ಪರಿಹಾರ ಇಲ್ಲದಾಗಿದೆ. ಇದೀಗ ಅತಿವೃಷ್ಟಿಯಿಂದಾಗಿ ಇನ್ನಷ್ಟು ರಸ್ತೆಗಳು ಹೊಂಡ, ಗುಂಡಿಗಳಿಂದ ತುಂಬಿವೆ.
ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ರಸ್ತೆ ಅಭಿವೃದ್ಧಿಗೆ ವಿವಿಧ ಮೂಲದಿಂದ ಅನುದಾನ ತರುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆ, ಪಿಡಬ್ಲೂೃಡಿ, ಪ್ರಧಾನಮಂತ್ರಿ ಗ್ರಾಮ ಸಡಕ್‌ಯೋಜನೆ, ಮುಖ್ಯಮಂತ್ರಿ ಗ್ರಾಮ ಸಡಕ್, ಸಂಸದರ ನಿಧಿ, ಶಾಸಕರ ನಿಧಿ ಇತ್ಯಾದಿ ಮೂದಿಂದ ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ರೂ.ಹಣ ಹರಿದು ಬರುತ್ತದೆ. ಆದರೆ, ರಸ್ತೆ ಕಾಮಗಾರಿ ಮುಗಿದ ನಂತರ ಬಿಲ್ ಪಾವತಿ ಬಗ್ಗೆ ತರಾತುರಿ ಇರುತ್ತದೆಯೇ ವಿನಃ ಆ ರಸ್ತೆಯ ಗುಣಮಟ್ಟವೇನು ಎಂಬ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ ಎನ್ನುತ್ತಾರೆ ಸುತ್ತಮತ್ತಲಿನ ಗ್ರಾಮಸ್ಥರು.

ಸುಮಾರು ವರ್ಷದಿಂದ ಈ ರಸ್ತೆಯಲ್ಲಿ ಡಾಂಬರು ಇಲ್ಲದಂತಾಗಿ ಬೃಹತ್ ಗುಂಡಿಗಳು ಬಿದ್ದಿವೆ. ರಸ್ತೆಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಹಾಳಾಗಿದೆ. ಗ್ರಾಪಂ ವತಿಯಿಂದ ಶೀಘ್ರ ಪರಿಹಾರ ಸಿಕ್ಕರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ವಿಜಯ ಕುಮಾರ್, ಗ್ರಾಮಸ್ಥ

ದೇವನಾಯಕನಹಳ್ಳಿಯಲ್ಲಿ ಮಳೆ ಬಂದರೆ ರಸ್ತೆ ಕುಂಟೆಯಾಗುತ್ತದೆ. ಗ್ರಾಪಂನಿಂದ ಡಾಂಬರು ರಸ್ತೆ ನಿರ್ಮಿಸಲು ಆಗುವುದಿಲ್ಲ. ತಾಲೂಕಿನ ಶಾಸಕರ ಗಮನಕ್ಕೆ ತಂದಿದ್ದೇವೆ. ಈ ರಸ್ತೆ ನಿರ್ಮಾಣವಾದರೆ ಸೋಮತ್ತನಹಳ್ಳಿ ಹಾಗೂ ದೇವನಾಯಕನಹಳ್ಳಿ 2 ಗ್ರಾಮಸ್ಥರಿಗೂ ಅನುಕೂಲವಾಗುತ್ತದೆ.
ಕಮಲೇಶ್, ಚೌಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net