ಕೆಲವೇ ದಿನಗಳಲ್ಲಿ ಮದಗದಕೆರೆ ನೀರು ಖಾಲಿ!

web
Published on

ಕಡೂರು: ಮದಗದಕೆರೆ ತೂಬು ನಿರ್ಮಾಣ ಕಾಮಗಾರಿ ಮತ್ತು ಕೋಡಿ ದುರಸ್ತಿ ಸಂಬಂಧ ಕೆರೆ ನೀರು ಖಾಲಿ ಮಾಡಲು ಗುರುವಾರ ಆಯೋಜಿಸಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಶಾಸಕ ಬೆಳ್ಳಿ ಪ್ರಕಾಶ್ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಉಪವಿಭಾಗಾಧಿಕಾರಿ ಬಿ.ಆರ್.ರೂಪಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫೆ.18ರಂದು ಕೆರೆ ತೂಬು ತೆರೆದು ಚಾನಲ್ ಮೂಲಕ ನೀರನ್ನು ಹರಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.

ಕಳೆದ ಬಾರಿ ನೀರಿನ ಒತ್ತಡ ಹೆಚ್ಚಾಗಿ ನಿರ್ವಿುಸಿದ್ದ ತೂಬು ದುರಸ್ತಿಗೆ ಬಂದಿತ್ತು. ಹಣ ಬಿಡುಗಡೆಯಾಗದಿದ್ದರೂ ಶಾಸಕ ಬೆಳ್ಳಿ ಪ್ರಕಾಶ್ ಅವರು ರೈತರ ಹಿತದೃಷ್ಟಿಯಿಂದ ತೂಬು ನಿರ್ವಣಕ್ಕೆ ಮುಂದಾಗಿ ಶೇ.70 ಭಾಗ ಕಾಮಗಾರಿ ಮುಗಿದಿತ್ತು. ಆಗ ಪುನಃ ಕೆರೆ ಭರ್ತಿಯಾಗಿ ಕಾರ್ಯ ಸ್ಥಗಿತಗೊಂಡಿತ್ತು.

ಈ ಬಾರಿ ತೂಬು ನಿರ್ಮಾಣ ಕೆಲಸ ಮುಂದುವರಿಕೆ, ಕೆರೆಯ ಕೋಡಿ ಭದ್ರ ಪಡಿಸುವುದು ಮತ್ತು ಏರಿಯನ್ನು ಬಿಗಿಗೊಳಿಸುವುದು ಸೇರಿ ಮತ್ತಿತರೆ ಕೆಲಸವನ್ನು ನಿರ್ವಹಿಸಲು ಈಗಾಗಲೆ ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿ 5 ಕೋಟಿ ರೂ. ಹಣ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ಮಾಹಿತಿ ನೀಡಿದರು.

ತೂಬು ತೆರೆದಾಗ ನೀರಿನ ಒತ್ತಡ ಹೆಚ್ಚಾಗಿರುತ್ತದೆ. ಸಣ್ಣ ನೀರಾವರಿ ಇಲಾಖೆ ಮುಖ್ಯ ನಾಲೆಗಳಲ್ಲಿ ಗಿಡಗಂಟಿ ತೆರವುಗೊಳಿಸುತ್ತದೆ. ಆದರೂ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಿ ಚಾನೆಲ್​ಗಳ ಸ್ವಚ್ಛತೆಯತ್ತ ಗಮನಹರಿಸಬೇಕು. ಪ್ರತಿಯೊಬ್ಬರೂ ಚಾನೆಲ್ ಮೂಲಕ ಹರಿಯುವ ನೀರಿನ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ಬೀರೂರು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಮದಗದಕೆರೆಗೆ 16 ಮಡಬಾಯಿ ಇವೆ. ರೈತರ ಹಿತದೃಷ್ಟಿಯಿಂದ ಈ ಮಡಬಾಯಿಗಳನ್ನು ಹೆಚ್ಚು ಅಥವಾ ಕಡಿಮೆ ಮಾಡುವುದು ಬೇಡ ಎಂದು ಅಭಿಪ್ರಾಯಪಟ್ಟರು.

ಕಡೂರು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಚ್.ಶಂಕರ್ ಮಾತನಾಡಿ, ಕೆಗ್ಗೆರೆ ಕೋಡಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬೇಕು. ಹಳೆಯ ಕೋಡಿ ದುರಸ್ತಿ ಹಂತದಲ್ಲಿದೆ. ಇದರಿಂದ ಚಿಕ್ಕಂಗಳ ಮತ್ತು ಕಡೂರು ಪಟ್ಟಣದ ರೈತರ ನಡುವೆ ಸದಾ ಕಲಹ ನಡೆಯುತ್ತಿರುತ್ತದೆ. ಇದೇ ಸಂದರ್ಭ ಕೊಡಿ ನಿರ್ಮಾಣ ಕೈಗೆತ್ತಿಕೊಂಡರೆ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಸಲಹೆ ನೀಡಿದರು.

ಬಿ.ಆರ್.ರೂಪಾ ಮಾತನಾಡಿ, ಅಂದಾಜು ಎರಡೂವರೆ ತಿಂಗಳಿಗೂ ಅಧಿಕ ಕಾಲ ತೂಬಿನ ಮೂಲಕ ನೀರು ಹರಿಯಲಿದೆ. ರೈತರು ಸಾಧ್ಯವಾದಷ್ಟು ಸಂಯಮ, ಸೌಹಾರ್ದದಿಂದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕ್ಷೇತ್ರದ ಅಂತರ್ಜಲ ವೃದ್ಧಿಯಾಗುವ ಸಂಬಂಧ ಸರಣಿ ಕೆರೆಗಳು ಭರ್ತಿಯಾಗಲು ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಜಿಪಂ ಉಪಾಧ್ಯಕ್ಷ ಜಿ.ಎನ್.ವಿಜಯ್ಕುಮಾರ್, ಸದಸ್ಯ ಕೆ.ಆರ್.ಮಹೇಶ್​ಒಡೆಯರ್, ತಹಸೀಲ್ದಾರ್ ಜೆ.ಉಮೇಶ್, ಸಣ್ಣ ನೀರಾವರಿ ಇಲಾಖೆ ಎಇಇ ಎಚ್.ದಯಾಶಂಕರ್, ಜೆಇ ಮಂಜುನಾಥ್, ಸಿಪಿಐ ಮಂಜುನಾಥ್, ಪಿಎಸ್​ಐ ವಿಶ್ವನಾಥ್, ಅಡಕೆ ಬೆಳೆಗಾರರಾದ ಅರೇಕಲ್ ಪ್ರಕಾಶ್, ಬಸವರಾಜ್, ದಿವಾಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net