ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿಡಿಯೋ ತಿರುಚಿದವನ ಬಂಧನ

sunil
Published on

ಮಂಗಳೂರು: ದ.ಕ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಸ್ಥಳೀಯ ಚಾನೆಲ್‌ಗೆ ನೀಡಿದ ಸಂದರ್ಶನದ ವಿಡಿಯೋವನ್ನು ತಿರುಚಿ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ತೇಜೋವಧೆ ನಡೆಸಿದ ಆರೋಪದಲ್ಲಿ ಸುನೀಲ್ ಬಜಿಲಕೇರಿ ಎಂಬಾತನನ್ನು ಬರ್ಕೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಭಾನುವಾರ ಸ್ಥಳೀಯ ಚಾನೆಲ್‌ನಲ್ಲಿ ನಳಿನ್ ಕುಮಾರ್ ಸಂದರ್ಶನ ಪ್ರಸಾರವಾಗಿತ್ತು. ಕಾರ್ಯಕ್ರಮ ವೇಳೆ ಚಿಕ್ಕಮಗಳೂರಿನಿಂದ ದೂರವಾಣಿ ಕರೆ ಮಾಡಿದ ಬಿಜೆಪಿ ಕಾರ್ಯಕರ್ತೆಯೊಬ್ಬರು ನಳಿನ್ ಅವರ ಪಕ್ಷ ಸಂಘಟನೆ ಬಗ್ಗೆ ಮೆಚ್ಚುಗೆ ಮಾತನ್ನಾಡಿದ್ದರು. ಇದರ ವಿಡಿಯೋ ತಿರುಚಿದ ರೀತಿಯಲ್ಲಿ ಜಾಲತಾಣದಲ್ಲಿ ಅಪ್‌ಲೋಡ್ ಆಗಿತ್ತು. ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ವಿಡಿಯೋ ತಿರುಚಲಾಗಿದೆ ಎಂದು ಸ್ಪಷ್ಟನೆಯನ್ನೂ ನೀಡಿದ್ದರು.

ವಿಡಿಯೋ ತಿರುಚಿ ಅಪ್‌ಲೋಡ್ ಮಾಡಿದ ಬಗ್ಗೆ ಚಾನೆಲ್‌ನ ಮ್ಯಾನೇಜರ್ ಪ್ರವೀಣ್ ದೂರು ನೀಡಿದ್ದರು. ಪ್ರಕರಣ ತನಿಖೆ ನಡೆಸಿದ ಪೊಲೀಸರು, ಸುನೀಲ್ ಬಜಿಲಕೇರಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಮೊಬೈಲ್ ದುರ್ಬಳಕೆ, ಮಾನಹಾನಿ, ಧ್ವನಿ ಮುದ್ರಣ ತಿರುಚಿದ ಆರೋಪ ಸೇರಿದಂತೆ ಸೆಕ್ಷನ್ 153(ಧರ್ಮಗಳ ನಡುವೆ ದ್ವೇಷ) ಕಠಿಣ ಕೇಸು ದಾಖಲಿಸಲಾಗಿದೆ. ಬಂಧಿತನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ವಿರುದ್ಧ ಮಾನಹಾನಿ ಎಸಗಿದ ಆರೋಪದಲ್ಲಿ ಶಾಸಕ ವೇದವ್ಯಾಸ ಕಾಮತ್ ಹಿಂದೆ ಮಾನನಷ್ಟ ಕೇಸು ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net