ಚನ್ನವಿರಗೌಡ ಪಾಟೀಲರ ಕಾರ್ಯ ಸ್ಮರಣೀಯ

5 vikram 19
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಚನ್ನವಿರಗೌಡ ಅಣ್ಣಾ ಶಿದ್ರಾಮಗೌಡ ಪಾಟೀಲ ಕಾರ್ಯ ಸದಾ ಸ್ಮರಣೀಯ. ಪಾಟೀಲರ ಸಾಧನೆ ಅಗ್ರ ಗಣ್ಯವಾಗಿದೆ. ಆದರೆ ನಮ್ಮ ಮಣ್ಣಿನ ಮಕ್ಕಳ ಸಾಧನೆ, ಕಾರ್ಯಗಳನ್ನು ಗುರುತಿಸಿ ಸಮಗ್ರವಾಗಿ ಜಗತ್ತಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ ದಿ. ಚನ್ನವಿರೌಡ ಅಣ್ಣಾ ಶಿದ್ರಾಮಗೌಡ ಪಾಟೀಲ ಸಂಸ್ಮರಣೆ ದತ್ತಿ ಕಾರ್ಯಕ್ರಮದಲ್ಲಿ ಪ್ರೊ. ಮಲ್ಲಿಕಾರ್ಜುನ ಪಾಟೀಲ ರಚಿಸಿದ ಸೈದಾಪುರ ಸಿ.ಎಸ್​.ಪಾಟೀಲ ಜೀವನ ಮತ್ತು ಸಾಧನೆ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಈ ನಾಡು, ದೇಶದಲ್ಲಿ ಆಮೂಲಾಗ್ರವಾಗಿರುವಂತಹ ಬದಲಾವಣೆ ಮಾಡುವ ಶಕ್ತಿ ಇರುವುದು ದೇಶ ಅಥವಾ ಸಂಸ್ಥೆಗಳಲ್ಲ. ವ್ಯಕ್ತಿಗಳಲ್ಲಿ. ಬುದ್ಧ, ಬಸವ, ಪೈಗಂಬರ ಬದಲಾವಣೆ ತಂದವರು. ವ್ಯಕ್ತಿಯಲ್ಲಿನ ಗುರಿ, ಗುರಿ ಮುಟ್ಟುವ ದಾರಿ, ಸಾಧನೆಯ ಶಕ್ತಿ, ಕೇಂದ್ರೀಕೃತವಾತ ಮನಸ್ಸಿನಿಂದ ಈ ಬದಲಾವಣೆ ಮಾಡಲು ಸಾಧ್ಯ. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮಲ್ಲಿ ಏಕಾಗ್ರತೆ ಇತ್ತು. ಆದರೆ ನಂತರದಲ್ಲಿ ಏಕಾಗ್ರತೆ ಹೋಗಿ ಎರಡು ದೇಶವಾಗಿ ಒಡೆಯಿತು. ಬದಲಾವಣೆ ಹೇಗೆ ನಿರ್ವಹಿಸಬೇಕು? ಬದಲಾವಣೆ ನಂತರ ಏನು ಎನ್ನುವ ಚಿಂತನೆ ಆಗಬೇಕು ಎಂದರು.

ವಿದ್ಯಾವರ್ಧಕ ಸಂಘ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಸಂಘವಲ್ಲ. ನಮ್ಮ ನಾಡು, ನುಡಿ ಜಲ ಹಾಗೂ ಬದುಕಿನ ಎಲ್ಲ ವಿಷಯಗಳಿಗೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿದೆ. ಸೈದಾಪುರ ಗೌಡರ ಶಿಸ್ತು, ಪರಂಪರೆಯನ್ನು ಇಂದಿಗೂ ಅವರ ಮರಿಮೊಮ್ಮಗ ಸಿ.ಎಸ್​. ಪಾಟೀಲರು ಉಳಿಸಿಕೊಂಡು ಬಂದಿದ್ದಾರೆ. ಇಂತಹ ಧಾರವಾಡ ನೆಲದ ಅಂತಸತ್ವ, ಆತ್ಮೀಯತೆ, ಪ್ರೀತಿ, ವಿಶ್ವಾಸವನ್ನು ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ಮಾಜಿ ಶಾಸಕ ವಿ.ಐ. ಪಾಟೀಲ, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಿ.ಎಸ್​. ಪಾಟೀಲ, ಶಂಕರ ಕುಂಬಿ, ಪ್ರೊ. ಮಲ್ಲಿಕಾರ್ಜುನ ಪಾಟೀಲ, ಪಾಟೀಲ ಕುಟುಂಬಸ್ಥರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net