

ಹಾಸನ: ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಎ.ಬೆಳಗುಲಿ ಗ್ರಾಮದ ಜಮೀನುವೊಂದರಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಗುರುವಾರ ಸಂಜೆ ಧಿಡೀರ್ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಆರೋಪಿ ತಲೆ ಮರೆಸಿಕೊಂಡಿದ್ದಾರೆ. ಗ್ರಾಮದ ಭಾಗ್ಯಮ್ಮ ಎಂಬವರ ಜಮೀನಿನಲ್ಲಿ ರಾಗಿ ಹಾಗೂ ಜೋಳದ ಬೆಳೆಯ ಸಾಲಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಧಿಡೀರ್ ದಾಳಿ ನಡೆಸಲಾಯಿತು.
ರಾಗಿ ಹಾಗೂ ಜೋಳದ ಸಾಲಿನಲ್ಲಿ ಅಲ್ಲಲ್ಲಿ ಬೆಳೆಯಲಾಗಿದ್ದ ಸುಮಾರು 10 ಸಾವಿರ ರೂ. ಮೌಲ್ಯದ 745 ಗ್ರಾಂ ಗಾಂಜಾ ಗಿಡಗಳನ್ನು ಕಿತ್ತು ವಶಕ್ಕೆ ಪಡೆಯಲಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಜಮೀನಿನ ಮಾಲೀಕರಾದ ಭಾಗ್ಯಮ್ಮ ತಲೆ ಮರೆಸಿಕೊಂಡಿದ್ದು ಪ್ರಕರಣ ದಾಖಿಸಿಕೊಂಡಿರುವ ತಾಲೂಕು ಅಬಕಾರಿ ಇಲಾಖೆ ಅಧಿಕಾರಿಗಳು ಆರೋಪಿಯ ಸೆರೆಗೆ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಚನ್ನರಾಯಪಟ್ಟಣ ವಲಯದ ಅಬಕಾರಿ ನಿರೀಕ್ಷಕಿ ಎಂ.ಜೆ.ಅನಿತಾ, ಅಬಕಾರಿ ಉಪ ನಿರೀಕ್ಷಕಿ ಜೆ.ಸಿ.ಸುನೀತಾ, ಸಿಬ್ಬಂದಿ ಕೆ.ವೀರಭದ್ರ, ಎನ್.ಎಸ್.ಜೀವನ್, ಅಭಿಲಾಷ್, ಎನ್.ವಿ.ಕಿರಣಿ, ಬಿ.ಅರ್.ಶಿವಕುಮಾರ್, ಜೆ.ಎಂ.ಪ್ರದೀಪ್ ಹಾಗೂ ವಾಹನ ಚಾಲಕ ಕೆ.ಜೆ.ರಾಜೇಶ್ ಇದ್ದರು.