

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಕೈಗಾರಿಕೆಗಳಿಗೆ ಭೂಮಿ ನೀಡುವುದನ್ನು ವಿರೋಧಿಸಿ ಚನ್ನರಾಯಪಟ್ಟಣದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಜು.21ಕ್ಕೆ 475 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಂದು ಹೋರಾಟದ ಸ್ಥಳದಲ್ಲೇ ರೈತ ಹುತಾತ್ಮ ದಿನ ಆಚರಿಸಲಾಗುವುದು ಎಂದು ಸಮಿತಿ ಮುಖಂಡ ಮಾರೇಗೌಡ ತಿಳಿಸಿದರು.
ಚನ್ನರಾಯಪಟ್ಟಣದ ನಾಡಕಚೇರಿ ಮುಂಭಾಗ ಹಮ್ಮಿಕೊಂಡಿರುವ ಹೋರಾಟದಲ್ಲಿ ಮಂಗಳವಾರ ಮಾತನಾಡಿ, ಈ ಹಿಂದೆ ಪ್ರತಿ ಪಕ್ಷದಲ್ಲಿದ್ದ ಸಿಎಂ ಸಿದ್ದರಾಮಯ್ಯ ಅವರು ಅಂದು ಹೋರಾಟವನ್ನು ಬೆಂಬಲಿಸಿದ್ದರು. ಈಗ ಅವರದೇ ಅಧಿಕಾರವಿದ್ದು, ಭೂ ಸ್ವಾಧೀನ ನಿರ್ಧಾರ ಕೈ ಬಿಡುವಂತೆ ಒತ್ತಾಯಿಸಿದರು.
ತಾಪಂ ಮಾಜಿ ಸದಸ್ಯ ಹಾಗೂ ರೈತ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಇಲ್ಲಿನ ದಲ್ಲಾಳಿಗಳು ರೈತರು ಭೂಮಿ ಕೊಡಲು ಸಿದ್ಧರಿದ್ದಾರೆ ಎಂದು ವದಂತಿಗಳನ್ನು ಹಬ್ಬಿಸುತ್ತಿದ್ದು, ಇದಕ್ಕೆ ಕಿವಿಗೊಡುವ ಅಗತ್ಯವಿಲ್ಲ. ಎಲ್ಲರೂ ಭೂಮಿ ಉಳಿಸುವ ಹೋರಾಟವನ್ನು ಮುಂದುವರಿಸಬೇಕು ಎಂದರು.
ಯುವ ರೈತ ಸುರೇಶ್ ಮಾತನಾಡಿ, ಭೂ ದಲ್ಲಾಳಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅನುಭವಿಗಳಾದ ಶಾಸಕರು ಆ ಮಾತುಗಳಿಗೆ ಕಿವಿಗೊಡದೆ, ವಸ್ತು ಸ್ಥಿತಿಯನ್ನು ಅವಲೋಕಿಸಿ ರೈತರ ಪರ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು. ನಮ್ಮಲ್ಲಿ ಶೇ.70ಕ್ಕೂ ಹೆಚ್ಚು ರೈತರು ಭೂಮಿ ಕೊಡುವುದಿಲ್ಲ ಎಂದು ಸರ್ಕಾರಕ್ಕೆ ನೀಡಿರುವ ದಾಖಲೆಗಳಿವೆ. ಅವುಗಳನ್ನು ಯಾರಿಗೆ ಬೇಕಾದರೂ ನಾವು ನೀಡಲು ಸಿದ್ಧರಿದ್ದೇವೆ ಎಂದರು.
ರೈತರಾದ ಮುಕುಂದ, ಸೊಣ್ಣೇಗೌಡ, ಪ್ರಮೋದ್, ರಮೇಶ್, ಮೋಹನ್, ಪುನೀತ್, ರವಿಚಂದ್ರ, ಮೂರ್ತಿ ಇದ್ದರು.