

ಚನ್ನರಾಯಪಟ್ಟಣ: ತಾಲೂಕು ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಕಳೆದ ಬುಧವಾರ ತಾಲೂಕಿನ ಶ್ರವಣಬೆಳಗೊಳ, ದಂಡಿಗನಹಳ್ಳಿ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾದರೆ, ಗುರುವಾರದ ನಂತರ ಹಿರೀಸಾವೆ, ನುಗ್ಗೇಹಳ್ಳಿ ಹಾಗೂ ಬಾಗೂರು ವ್ಯಾಪ್ತಿಯಲ್ಲಿ ತಕ್ಕಮಟ್ಟಿಗೆ ಮಳೆ ಸುರಿದಿದೆ. ಹೀಗಾಗಿ ತಾಲೂಕಿನ ಬಹುತೇಕ ಭಾಗದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ.
ತಾಲೂಕು ಸುಮಾರು 4300 ಹೆಕ್ಟೇರ್ ಕೃಷಿ ಪ್ರದೇಶ ಹೊಂದಿದ್ದು, ಸದ್ಯ ಸುರಿದಿರುವ ಮಳೆಯ ಹದದಲ್ಲಿ ಶೇ.30 ರಷ್ಟು ಕೃಷಿ ಜಮೀನಿನಲ್ಲಿ ಮುಸುಕಿನ ಜೋಳ ಬಿತ್ತನೆ ಕಂಡಿದೆ. ಶೇ.15 ರಷ್ಟು ಪ್ರದೇಶದಲ್ಲಿ ಶೇಂಗಾ, ಅಲಸಂದೆ ಹಾಗೂ ತೊಗರಿ ಬಿತ್ತನೆ ಕಂಡರೆ, ಇನ್ನುಳಿದ ಕೃಷಿ ಜಮೀನು ರಾಗಿ ಬಿತ್ತನೆಗೆ ಹಸನುಗೊಳ್ಳುತ್ತಿದೆ.
ತಾಲೂಕಿನಲ್ಲಿ ಈ ಬಾರಿ ಶೇಂಗಾ ಬೆಳೆಗೂ ರೈತರು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ದೇವಿಗೆರೆ ಸೇರಿ ಬಹುತೇಕ ಕಡೆ ಬಿತ್ತನೆ ಕಂಡಿದೆ. ಒಂದು ಎಕರೆ ಕೃಷಿ ಜಮೀನಿಗೆ ಸುಮಾರು 25 ಕೆಜಿ ಬಿತ್ತನೆ ಬೀಜ ಅಗತ್ಯವಿದ್ದು, 3 ತಿಂಗಳಲ್ಲಿ ಫಸಲು ರೈತನ ಕೈಸೇರಲಿದೆ. ಜತೆಗೆ ಉತ್ತಮ ಬೆಲೆಯೂ ಲಭ್ಯವಾಗಲಿದೆ ಎನ್ನುತ್ತಾರೆ ದೇವಿಗೆರೆ ಗ್ರಾಮದ ರೈತ ನಂಜೇಗೌಡ.
ತಾಲೂಕು ವ್ಯಾಪ್ತಿಯಲ್ಲಿರುವ ಆರು ರೈತ ಸಂಪರ್ಕ ಕೇಂದ್ರಗಳಲ್ಲಿ ಅಲಸಂದೆ, ರಾಗಿ, ತೊಗರಿ, ಅಪ ಸೆಣಬು ಹಾಗೂ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ರೈತರು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಖರೀದಿಸಬಹುದು.
ರಶ್ಮಿ, ಪ್ರಭಾರ ಸಹಾಯಕ ಕೃಷಿ ನಿರ್ದೇಶಕಿ