ಚನ್ನರಾಯಪಟ್ಟಣ ತಾಲೂಕು ಕಚೇರಿ ಸೀಲ್‌ಡೌನ್

18 CRP 04 (1)
Published on

ಚನ್ನರಾಯಪಟ್ಟಣ: ಸರ್ವೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು (ಮಿನಿ ವಿಧಾನಸೌಧ) ಶನಿವಾರ ಸಂಜೆ ಸೀಲ್‌ಡೌನ್ ಮಾಡಲಾಯಿತು.

ಜು.7ರಂದು ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸರ್ವೇ ಅಧಿಕಾರಿಯೊಬ್ಬರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಜು.18ರಂದು ಬಂದ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ತಕ್ಷಣ ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ಇನ್ನು ಅಧಿಕಾರಿ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸುಮಾರು 50 ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಜತೆಗೆ ಹೋಮ್ ಕ್ವಾರಂಟೈನ್ ಮಾಡಲು ತಾಲೂಕು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ತಾಲೂಕು ಕಚೇರಿ (ಮಿನಿ ವಿಧಾನಸೌಧ) ಕಟ್ಟಡದಲ್ಲಿ ಕಂದಾಯ, ಸರ್ವೇ, ಉಪ ನೊಂದಣಾಧಿಕಾರಿಗಳ ಕಚೇರಿ, ಕಾರ್ಮಿಕರ ಇಲಾಖೆ ಹಾಗೂ ಖಜಾನೆ ಇದ್ದು, ಸುಮಾರು 120ಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಿಸುತಿದ್ದಾರೆ. ತಾಲೂಕು ಕಚೇರಿಯ ಒಳ ಹಾಗೂ ಹೊರ ಅಂಗಳಕ್ಕೆ ಔಷಧ ಸಿಂಪಡಿಸಲಾಗಿದೆ. ತಹಸೀಲ್ದಾರ್‌ರ ಮುಂದಿನ ಆದೇಶದವರೆಗೂ ಸೀಲ್‌ಡೌನ್ ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net