ಕೋಟೆ ಚಂದ್ರಮೌಳೇಶ್ವರ ರಥೋತ್ಸವ ವೈಭವ

12 CRP 01
Published on

ಚನ್ನರಾಯಪಟ್ಟಣ: ಪಟ್ಟಣದ ಶ್ರೀಕೋಟೆ ಚಂದ್ರಮೌಳೇಶ್ವರಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆ ಸುಪ್ರಭಾತ ಸೇವೆ ಮೂಲಕ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶಿವ ಪಾರಾಯಣ, ಬಿಲ್ವಾ ಪತ್ರಾರ್ಚನೆ ಜರುಗಿದ ಬಳಿಕ ಹೂವಿನಿಂದ ವಿಶೇಷವಾಗಿ ಸ್ವಾಮಿಗೆ ಅಲಂಕಾರ ಮಾಡಲಾಯಿತು, ಭಕ್ತರು ಈಶ್ವರನ ಭಕ್ತಿಗೀತೆ ಹಾಡಿದರು.


ಚಂದ್ರಮೌಳೇಶ್ವರಸ್ವಾಮಿ ಉತ್ಸವ ಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವವು ಮಂಗಳವಾದ್ಯದೊಂದಿಗೆ ಪ್ರಾರಂಭಗೊಂಡು ಕೋಟೆ ಬೀದಿಯಲ್ಲಿ ಸಾಗಿತು. ಬಳಿಕ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಿದ್ದ ರಥದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ರಥಕ್ಕೆ ಬಲಿಶಾಂತಿ ಪೂಜೆ ನೆರವೇರಿಸಿದ ನಂತರ ಬಾಳೆಕಂಬ ಕಡಿಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.


ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ಟರು ಮತ್ತು ಅರ್ಚಕ ವೃಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾ ಮಂಗಳಾರತಿ ನೆರವೇರಿಸಿದರು.
ಭಕ್ತರು ಜಯಘೋಷ ಕೂಗುತ್ತ ರಥ ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರೆ, ಕೆಲ ಭಕ್ತರು ರಥೋತ್ಸವ ಸಾಗಿದಂತೆಲ್ಲ ಬಾಳೆಹಣ್ಣು, ಹೂವು-ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.


ಪುರಸಭಾ ಸದಸ್ಯರಾದ ಸಿ.ಎನ್.ಶಶಿಧರ್, ಮೋಹನ್‌ಕುಮಾರ್, ಬನಶಂಕರಿ, ಪುರಸಭಾ ಮುಖ್ಯಾಧಿಕಾರಿ ಎಂ.ಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net