ಆಕಸ್ಮಿಕ ಬೆಂಕಿ ಬಿದ್ದು ಕೊಟ್ಟಿಗೆ ಭಸ್ಮ

16 CRP 02 (3)
Published on

ಚನ್ನರಾಯಪಟ್ಟಣ: ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ಕೊಟ್ಟಿಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಗಾಯಗೊಂಡಿವೆ.


ಗ್ರಾಮದ ನಿವಾಸಿ ದೇವರಾಜೇಗೌಡ ಎಂಬವರು ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಯಲ್ಲಿ ಎಂದಿನಂತೆಯೇ ಒಂದು ಸೀಮೆಹಸು ಹಾಗೂ ಅದರ ಕರುವೊಂದನ್ನು ಕಟ್ಟಿ ಮೇವು ಹಾಕಿ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.


ಮಧ್ಯಾಹ್ನ ಸುಮಾರಿನಲ್ಲಿ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತು ಉರಿಯಲಾರಂಭಿಸಿದೆ. ಬೆಂಕಿಯ ರಭಸ ಹಾಗೂ ಬಿಸಿ ತಾಗಿದ ಕಾರಣ ಕೊಟ್ಟಿಗೆ ಒಳಗೆ ಗೊಂತಿನಲ್ಲಿ ಕಟ್ಟಿದ್ದ ಹಸು ಮೂಗುದಾರ ಸಮೇತ ಕಿತ್ತುಕೊಂಡು ಹೊರಬಂದಿದೆ, ಜತೆಗೆ ಸದ್ಯ ಹಗ್ಗದಿಂದ ಕಟ್ಟಿಲ್ಲವಾದ್ದರಿಂದ ಕರುವೂ ಕೊಟ್ಟಿಗೆಯಿಂದ ಹೊರ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿವೆ.


ಆದರೆ ಅಷ್ಟರಲ್ಲಿ ಬೆಂಕಿ ಉರಿದಂತೆಲ್ಲ ಕೆಳ ಉದುರಿದ ಕೆಂಡ ತಾಗಿ ಹಸು ಹಾಗೂ ಕರುವಿನ ಮೈಯಲ್ಲಿ ತೀವ್ರ ಸುಟ್ಟ ಗಾಯಗಳಾಗಿವೆ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಬೆಂಕಿ ನಂದಿಸುವುದರ ಜತೆಗೆ ಹಸು ಹಾಗೂ ಕರುವಿನ ಆರೈಕೆ ಮಾಡಿದರು.


ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚನ್ನರಾಯಪಟ್ಟಣದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದು, ಸದ್ಯ ಸುತ್ತಮುತ್ತಲಿರುವ ಮನೆ, ಗುಡಿಸಲು ಹಾಗೂ ತೋಟದ ಸಾಲಿಗೆ ಬೆಂಕಿ ಹರಡಿ ಆಗಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

16 ಸಿಆರ್‌ಪಿ 02(2): ಬೆಂಕಿಯಿಂದ ಗಾಯಗೊಂಡ ಹಸು ಹಾಗೂ ಕರುವನ್ನು ಸ್ಥಳೀಯರ ಸಹಕಾರದೊಂದಿಗೆ ಪಶು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಆರೈಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net