

ದೇವನಹಳ್ಳಿ: ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದ ಬಗ್ಗೆ ಎರಡ್ಮೂರು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವರ ಜತೆ ಮಾತನಾಡಿದ್ದು, ಕೆಐಎಡಿಬಿ ವಶಪಡಿಸಿಕೊಳ್ಳಲು ಮುಂದಾಗಿರುವ ಚನ್ನರಾಯಪಟ್ಟಣದ ರೈತರ ಭೂಮಿ ಉಳಿಸಲು ಬದ್ಧನಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.
ಮುನಿಯಪ್ಪ ಅಭಯ ನೀಡಿದರು.
ಕಸಬಾ ಹೋಬಳಿ ವ್ಯಾಪ್ತಿಯ ಬಿದಲೂರು ಹಾಗೂ ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಆದರೆ ಈಗ ನನಗೆ ಇನ್ನೂ ಒಂದೆರಡು ವಾರ ಕಾಲಾವಕಾಶ ಬೇಕು. ವಾರೇಗೌಡ ಸೇರಿ ರೈತ ಮುಖಂಡರು ಡಿಸಿ ಕಚೇರಿ ಮುಂದೆ ಮಾ.17ರಿಂದ ಧರಣಿ ಮುಂದುವರಿಸುವ ನಿರ್ಧಾರ ಕೈಬಿಡಬೇಕು. ನಾನು ನಿಮ್ಮ ಜತೆಗೆ ಇದ್ದೇನೆ ಎಂದರು.
ಅಭಿವೃದ್ಧಿಯೇ ನಮ್ಮ ಪಕ್ಷದ ಮೂಲಮಂತ್ರವಾಗಿದ್ದು, ಹಳ್ಳಿಗಳಿಗೆ ಸಮರ್ಪಕ ರಸ್ತೆ ಚರಂಡಿ ಬೀದಿ ದೀಪ, ಕುಡಿಯು ನೀರು, ಬಸ್ ಸೌಲಭ್ಯ ಮುಂತಾದವುಗಳು ಅತ್ಯಗತ್ಯವಾಗಿದ್ದು, ಇವುಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸುವುದು ನಮ್ಮ ಕರ್ತವ್ಯವಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ತಾಲೂಕಿನಲ್ಲಿ 266.86 ಲಕ್ಷದ ರೂ.ವೆಚ್ಚದ ಕಾಮಗಾರಿ ಆರಂಭವಾಗಲಿದೆ. ಇದರ ನಂತರವೂ ಬಯಪದಿಂದ ಮತ್ತು ಗ್ರಾಪಂಗಳ ಅನುದಾನದಲ್ಲಿಯೂ ಅವಶ್ಯ ಕಾಮಗಾರಿಗಳನ್ನು ವಾಡಲು ಕ್ರಮ ವಹಿಸಲಾಗುವುದು. ಹಳ್ಳಿಗಳ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂದರು.
ಆಲೂರು ದುದ್ದನಹಳ್ಳಿ ಪಂಚಾಯಿತಿ ಸದಸ್ಯ ರು, ದೇವನಹಳ್ಳಿ ತಹಸೀಲ್ದಾರ್ ಬಾಲಕೃಷ್ಣ, ಇಒ ಶ್ರೀನಾಥ್ ಗೌಡ, ಬಿದಲೂರು ಗ್ರಾಪಂ ಅಧ್ಯಕ್ಷ ಕೋಡಗುರ್ಕಿ ನಾಗರಾಜ್, ಎಸ್.ಪಿ. ಮುನಿರಾಜ್, ಅತ್ತಿಬೆಲೆ ನರಸಪ್ಪ, ಆವತಿ ವೆಂಕಟೇಶ್, ನಾಗೇಗೌಡ,ಗುತ್ತಿಗೆದಾರರರಾದ ಮುರುಳಿ, ಬಚ್ಚೇಗೌಡ ಇದ್ದರು.
ಯಾವ್ಯಾವ ಕಾಮಗಾರಿಗೆ ಚಾಲನೆ?
ಬಿದಲೂರು ಗ್ರಾಪಂ ವ್ಯಾಪ್ತಿಯಲ್ಲಿ 57 ಲಕ್ಷ ರೂ.ವೆಚ್ಚದ 7 ಕಾಮಗಾರಿ, ಆವತಿ ಗ್ರಾಪಂ ವ್ಯಾಪ್ತಿಯಲ್ಲಿ 56 ಲಕ್ಷ ರೂ.ವೆಚ್ಚದ 7 ಕಾಮಗಾರಿ ಸೇರಿ ಒಟ್ಟು ತಾಲೂಕಿನಾದ್ಯಂತ 266.82 ಲಕ್ಷ ರೂ.ವೆಚ್ಚದ 29 ಕಾಮಗಾರಿಗಳನ್ನು ಒಳಗೊಂಡ ಕಾಂಕ್ರಿಟ್ ರಸ್ತೆ, ಚರಂಡಿ, ಸಮುದಾಯ ಭವನ, ಬಸ್ ನಿಲ್ದಾಣ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಭೂಮಿ ಪೂಜೆ ನೆರವೇರಿಸಿದರು.