

ಹಾಸನ (ಚನ್ನರಾಯಪಟ್ಟಣ): ಹಾಸನದಲ್ಲಿ ನಿಂಬೆ ಹಣ್ಣಿನ ರಾಜಕಾರಣ ನಡೆಯುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಟಾಂಗ್ ನೀಡಿದರು.
ಪಟ್ಟಣದ ಸವಿತಾ ಶಿವನಂಜೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದರು.
ಕೆಲವರು ನಿಂಬೆಹಣ್ಣು ಹಿಡಿದು ಓಡಾಡುತ್ತಾರೆ. ಅದರ ತೊಂದರೆ ಹಾಗೂ ಅನುಭವ ನನಗೆ ಹೆಚ್ಚಾಗಿದೆ. ನಿಂಬೆ ಹಣ್ಣಿನಿಂದ ಎಲ್ಲವನ್ನೂ ಪಡೆಯಬಹುದು ಮತ್ತು ರಾಜಕಾರಣ ಮಾಡಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಗುಡುಗಿದರು.
ನಿಂಬೆ ಹಣ್ಣಿಗೆ ಪ್ರೀತಂ ಜೆ. ಗೌಡ ಎಂಬ ಮತ್ತೊಂದು ಹಣ್ಣಿದ್ದು ಎಲ್ಲವನ್ನು ನಿಯಂತ್ರಿಸುವ ಶಕ್ತಿ ಇವರಿಗಿದೆ. ಅವರಿಗೆ ಇನ್ನಷ್ಟು ಶಕ್ತಿ, ಅಧಿಕಾರ ನೀಡಲು ನಾವೆಲ್ಲರೂ ಶ್ರಮ ವಹಿಸುತ್ತೇವೆ ಎಂದು ಹುರಿದುಂಬಿಸಿದರು.
ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಬಿಜೆಪಿಯಲ್ಲಿ ಅಸ್ಪಶ್ಯತೆ ಎಂಬುದಿಲ್ಲ. ಆದರೆ ಜೆಡಿಎಸ್‌ನಲ್ಲಿ ಅದು ವ್ಯಾಪಕವಾಗಿ ಹರಡಿದೆ. ಪರಿಶಿಷ್ಟ ಜಾತಿಯವರು ಅವರ ಮನೆ ಬಾಗಿಲಿಗೆ ಹೋದರೆ ಸ್ನಾನ ಮಾಡಿ ಕಾರ್ಯಕ್ರಮಕ್ಕೆ ಹೋಗುತ್ತಾರೆ ಎಂಬುದನ್ನು ನಾನು ಕೇಳಿದ್ದೇನೆ ಎಂದರು.