ಶ್ರವಣಬೆಳಗೊಳದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷ

13 CRP 02
Published on

ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಶ್ರೀಮಠದ ಆವರಣದಲ್ಲಿ ಇತ್ತೀಚೆಗೆ ಎರಡು ಚಿರತೆಗಳು ಪದೇ ಪದೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.


ಶ್ರವಣಬೆಳಗೊಳದ ಬೆಟ್ಟದ ತಪ್ಪಲಲ್ಲಿ ಕಲ್ಲುಬಂಡೆ ಹಾಗೂ ಕುರುಚಲು ಪೊದೆಗಳು ಹೆಚ್ಚಾಗಿದ್ದು ಚಿರತೆಗಳ ವಾಸಕ್ಕೆ ಹೇಳಿ ಮಾಡಿಸಿದಂತಿದೆ. ಹಾಗಾಗಿ ಈ ಭಾಗದಲ್ಲಿ ಚಿರತೆಗಳು ಹೆಚ್ಚಾಗಲು ಕಾರಣವಾಗಿದೆ.


ಮಠದ ಆವರಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ಚಿರತೆಗಳು ಜತೆಯಾಗಿ ಸಂಚರಿಸಿರುವುದು ಅಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದನ್ನು ಕಂಡ ಮೇಲೆ ಹಗಲಿನ ವೇಳೆಯಲ್ಲಿಯೂ ಜನರು ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 40 ದಿನಗಳ ಹಿಂದೆಯೇ ಚಿರತೆ ಸೆರೆಗೆ ಬೋನು ಅಳವಡಿಸಲಾಗಿದ್ದರೂ ಅದರಲ್ಲಿ ಬೀಳದ ಚಿರತೆಗಳು ಪಟ್ಟಣದೊಳಗೆಲ್ಲ ಸಂಚರಿಸಿ ನಾಯಿಗಳ ಬೇಟೆಗಾಗಿ ಹವಣಿಸುತ್ತಿರುವುದು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.


ವಿಷಯ ತಿಳಿದ ತಕ್ಷಣ ವಲಯ ಅರಣ್ಯಾಧಿಕಾರಿ ಎಚ್.ಆರ್.ಹೇಮಂತ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಚಿರತೆಗಳು ಸಂಚರಿಸಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ವೀಕ್ಷಿಸಿದ್ದು ಅದಕ್ಕನುಗುಣವಾಗಿ ಬೋನು ಸ್ಥಳಾಂತರಿಸುವ ಮೂಲಕ ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.


ಮೊದಲೆಲ್ಲ ಗುಡ್ಡ ಹಾಗೂ ಕುರುಚಲು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಮಠದ ಆವರಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅನಾಹುತ ಸಂಭವಿಸುವ ಮೊದಲೇ ಚಿರತೆಗಳನ್ನು ಸೆರೆ ಹಿಡಿಯಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಶ್ರವಣಬೆಳಗೊಳ ಬೆಟ್ಟದ ತಪ್ಪಲು ಹಾಗೂ ವ್ಯಾಪ್ತಿಯಲ್ಲಿ ಈ ಮೊದಲು 2 ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು, ನಂತರವೂ ಚಿರತೆ ಕಾಣಿಸಿಕೊಂಡ ಪರಿಣಾಮ ಒಂದೂವರೆ ತಿಂಗಳಿಂದ ಅಲ್ಲಿಯೇ ಬೋನು ಇರಿಸಲಾಗಿದೆ. ಸದ್ಯ ಕಾಣಿಸಿಕೊಂಡಿರುವ ಚಿರತೆಗಳನ್ನು ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಎಚ್.ಆರ್.ಹೇಮಂತ್‌ಕುಮಾರ್, ವಲಯ ಅರಣ್ಯಾಧಿಕಾರಿ, ಚನ್ನರಾಯಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net