

ಚನ್ನರಾಯಪಟ್ಟಣ: ಸುಮಾರು 73 ವರ್ಷಗಳ ಇತಿಹಾಸ ಹೊಂದಿರುವ ಚನ್ನರಾಯಪಟ್ಟಣದ ಪ್ರಸನ್ನ ಗಣಪತಿಯನ್ನು ಶನಿವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯೊಂದಿಗೆ ಪ್ರತಿಷ್ಠಾಪಿಸಲಾಗಿದ್ದು, 48 ದಿನಗಳ ಕಾಲ ಪ್ರತಿನಿತ್ಯ ವಿಘ್ನ ನಿವಾರಕನಿಗೆ ತ್ರಿಕಾಲ ಪೂಜೆ ನಡೆಯಲಿದೆ.
ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಶಿಲ್ಪಿ ಸಿ.ವಿ.ಪ್ರಸನ್ನ ಅವರು ನಿರ್ಮಿಸಿರುವ ನವಗ್ರಹ ಭಂಗಿಯ ಹತ್ತು ಅಡಿ ಎತ್ತರದ ಬೃಹತ್ ಆಕಾರದ ನವಗ್ರಹ ಗಣಪತಿಯನ್ನು ಅಯೋಧ್ಯೆ ರಾಮಮಂದಿರದಲ್ಲಿ ನಮ್ಮೂರ ಗಣಪನನ್ನು ವಿಶೇಷ ಅಲಂಕಾರದೊಂದಿಗೆ ಆಸ್ಥಾನ ಮಂಟಪದಲ್ಲಿ ಅರ್ಚಕ ಲ.ಕೃಷ್ಣ ಭಟ್ ಅವರ ನೇತೃತ್ವದಲ್ಲಿ ವಿಧಿವಿಧಾನಗಳೊಂದಿಗೆ ವೇದ ಮಂತ್ರ ಮಂಗಳ ವಾದ್ಯದ ಸಮೇತ ಮಂಗಳಾರತಿ ಬೆಳಗಿ ನವಗ್ರಹ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನನ್ನು ಪೂಜಿಸುವುದು ಪದ್ಧತಿ. ಇಂತಹ ಪವಿತ್ರ ಪೂಜಾ ಸ್ಥಾನ ಪಡೆದುಕೊಂಡಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸದ ಸಂಗತಿ ಎಂದರು.
ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವಜನಿಕರನ್ನು ಒಟ್ಟುಗೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಮುಂದಾಳತ್ವ ವಹಿಸಿಕೊಂಡು ಗಣೇಶ ಹಬ್ಬವನ್ನು ಆಚರಣೆಗೆ ತಂದರು. ಅವರ ಸ್ವಾತಂತ್ರೃ ಹೋರಾಟದ ಕರೆಗೆ ಚದುರಿ ಹೋಗಿದ್ದ ಜನರು ಜಾತಿ-ಮತ, ಭೇದ-ಭಾವವಿಲ್ಲದೆ ಬಹುಬೇಗನೆ ಸ್ಪಂದಿಸಿದರು ಎಂದು ನೆನಪಿಸಿದರು.
ಪುರಸಭೆ ಅಧ್ಯಕ್ಷ ಬನಶಂಕರಿ ರಘು, ಉಪಾಧ್ಯಕ್ಷೆ ರಾಣಿಕೃಷ್ಣ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಅಣತಿ ಆನಂದ, ಮೆಡಿಕಲ್ ವೆಂಕಟೇಶ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎ.ವಿ.ಜಯಪಾಲ್, ಗುತ್ತಿಗೆದಾರ ಸಿ.ಬಿ.ಗಂಗಾಧರ್, ಪುರಿಬಟ್ಟಿ ಮಂಜಣ್ಣ, ಶಾಮಿಯಾನ ರಘು, ಸೇವಾ ಸಮಿತಿ ಗೌರವ ಅಧ್ಯಕ್ಷ ಸಿ.ಕೆ.ಕೃಷ್ಣ, ಅಧ್ಯಕ್ಷ ಸಿ.ಎನ್.ಅಶೋಕ್, ಕಾರ್ಯದರ್ಶಿ ಸಿ.ವೈ.ಸತ್ಯನಾರಾಯಣ, ಖಜಾಂಚಿ ಸಿ.ಎಸ್. ಮನೋಹರ್, ಸಹಕಾರ್ಯದರ್ಶಿ ಮಹದೇವ್, ಸಹ ಖಜಾಂಚಿ ಲಕ್ಷ್ಮೀ ನಾರಾಯಣ ಗುಪ್ತ ಇತರರಿದ್ದರು.
ನಿತ್ಯವೂ ಅನ್ನದಾನ: 48 ದಿನಗಳ ಕಾಲ ಭಕ್ತರಿಗೆ ನವಗ್ರಹ ಗಣಪತಿ ದರ್ಶನ ನೀಡಲಿದ್ದು, ಪ್ರತಿದಿನ ತೀರ್ಥ ಪ್ರಸಾದದೊಂದಿಗೆ ಅನ್ನದಾನ ರಾತ್ರಿ ಗಣಪತಿ ಪೆಂಡಾಲ್‌ನಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಣಪತಿ ಪ್ರತಿಷ್ಠಾಪನೆ ನಿಮಿತ್ತ ಗಣಪತಿ ಪೆಂಡಾಲ್‌ನಲ್ಲಿ ಮಾಡಿರುವ ಅಯೋಧ್ಯೆ ರಾಮಮಂದಿರದಲ್ಲಿ ನಮ್ಮೂರ ಗಣಪ ವಿಶೇಷ ಅಲಂಕಾರ, ವಿದ್ಯುತ್ ದೀಪದ ಅಲಂಕಾರ ಸಾರ್ವಜನಿಕರ ಗಮನ ಸೆಳೆಯಲಿದ್ದು, ಇದನ್ನು ನೋಡಲು ತಾಲೂಕಿನ ನಾನಾ ಊರುಗಳಿಂದ ಭಕ್ತರು ಆಗಮಿಸುವರು. ಜತೆಗೆ ಪಟ್ಟಣದ ವಿವಿಧ ಸಂಘ ಸಂಸ್ಥೆಗಳು 48 ದಿನಗಳ ಕಾಲ ಅನ್ನದಾನ ಮಾಡುವುದು ಇಲ್ಲಿನ ವಿಶೇಷವಾಗಿದೆ.
ಗಣಪತಿ ಪೆಂಡಲಿನಲ್ಲಿ ಸಂಜೆ ಸಿ.ಎನ್.ವೆಂಕಟೇಶ್ ಅಧ್ಯಕ್ಷರು ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಕಲಾವಿದ ಮಹದೇವ್ ಇವರಿಂದ ಭಕ್ತಿಗೀತೆ ಹಾಗೂ ಭಾವಗೀತೆ ಹಾಗೂ ಕುಮಾರಿ ಬಿಂದುಶ್ರೀ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಣಪತಿ ಪೆಂಡಾಲಿನಲ್ಲಿ ಭಕ್ತರು ಶ್ರದ್ಧಭಕ್ತಿಪೂರ್ವಕವಾಗಿ ನಮನ ಸಲ್ಲಿಸಿ ಗೌರಿ ಹಾಗೂ ನವಗ್ರಹ ಗಣಪತಿಯ ದರ್ಶನ ಪಡೆದರು.