

: ವಿದ್ಯಾರ್ಥಿ ದೆಸೆಯಲ್ಲಿಯೇ ವ್ಯಾಪಾರ, ವ್ಯವಹಾರ ಜ್ಞಾನ ಹೇಳಿಕೊಡುವುದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ತಿಳಿಸಿದರು.
ತಾಲೂಕಿನ ಗಡಿ ಗ್ರಾಮ ಅರಳಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ಕೇವಲ ಆಟ-ಪಾಠಕ್ಕೆ ಸೀಮಿತವಾಗದೆ ಲೋಕ ಜ್ಞಾನ, ವ್ಯವಹಾರಿಕ ಜ್ಞಾನ ತಿಳಿದುಕೊಳ್ಳಬೇಕು. ಸಂತೆ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುತ್ತದೆ. ಪಾಲಕರು ಮಕ್ಕಳಿಗೆ ಸದಾ ಓದುವಂತೆ ಒತ್ತಡ ಹೇರದೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಬೇಕು ಎಂದು ತಿಳಿಸಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು. ಮುಖ್ಯಶಿಕ್ಷಕ ಕೃಷ್ಣಪ್ಪ, ಶಿಕ್ಷಣ ಸಂಯೋಜಕ ತಮ್ಮಣ್ಣ, ಸಹಶಿಕ್ಷಕ ಕೆಂಪೇಗೌಡ, ಅರಳಾಪುರ ಗ್ರಾಮದ ಮುಖಂಡ ಸುರೇಶ್ ಮತ್ತಿತರರು ಇದ್ದರು.
ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಹೊನ್ನಾಯಕನ ಹಳ್ಳಿ, ಬ್ಯಾಡರಹಳ್ಳಿ ಹುಲವಾಡಿ, ಮಾಚಹಳ್ಳಿ, ಕೆಸ್ತೂರು, ತೂಬಿನಕೆರೆ ಮುಂತಾದ ಸುತ್ತಮುತ್ತಲ ಶಾಲೆಯ ಶಿಕ್ಷಕರು ಶಾಲೆಯ ಮಕ್ಕಳೊಂದಿಗೆ ಆಗಮಿಸಿ ಸಂತೆಯಲ್ಲಿನ ವ್ಯಾಪಾರದ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು. ಮಕ್ಕಳ ಸಂತೆಯಲ್ಲಿ 40 ಸಾವಿರ ರೂ.ಗಳಿಗೂ ಹೆಚ್ಚು ವಹಿವಾಟು ನಡೆಯಿತು.
ಮಕ್ಕಳಿಂದ ಭರ್ಜರಿ ವ್ಯಾಪಾರ: ವಿವಿಧ ತರಕಾರಿ, ಕುರುಕಲು ತಿಂಡಿ ತಿನಿಸುಗಳ ಮಳಿಗೆ ತೆರೆದಿದ್ದ ಮಕ್ಕಳು ಸಂತೆಯಲ್ಲಿನ ವ್ಯಾಪಾರಿಗಳನ್ನು ನಾಚಿಸುವಂತೆ ವ್ಯಾಪಾರ ನಡೆಸಿದರು. ಟೊಮ್ಯಾಟೊ, ಕ್ಯಾರೆಟ್, ಅವರೇಕಾಯಿ ಸೇರಿ ಹಲವು ತರಕಾರಿಗಳ ರಾಶಿ ಕಂಡುಬಂತು. ಟೊಮ್ಯಾಟೊ ಕೆ.ಜಿ.ಗೆ 10ರೂ., ಸೋಪ್ಪು ಒಂದು ಕಟ್ಟು 5 ರೂ. ಬೆಲೆಯಲ್ಲಿ ಪೈಪೋಟಿಗೆ ಬಿದ್ದವರಂತೆ ಕೂಗುತ್ತ ಗ್ರಾಹಕರನ್ನು ಸೆಳೆಯುತ್ತಿದ್ದುದು ಕಂಡುಬಂತು. ಪಾಲಕರು ಹಾಗೂ ಗ್ರಾಮಸ್ಥರು ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.