ಸಂಭ್ರಮದ ಚನ್ನಪ್ಪ ಸ್ವಾಮೀಜಿ ಮಹಾರಥೋತ್ಸವ

mkg1
Published on

ಹೊನ್ನಾಳಿ: ಇಲ್ಲಿನ ಹಿರೇಕಲ್ಮಠದ ಚನ್ನಪ್ಪ ಸ್ವಾಮೀಜಿ ಮಹಾರಥೋತ್ಸವವು ಮಂಗಳವಾರ ಸಾವಿರಾರು ಭಕ್ತ ಸಮೂಹದ ನಡುವೆ ಅದ್ದೂರಿಯಾಗಿ ನೆರವೇರಿತು.

ಚನ್ನಪ್ಪ ಸ್ವಾಮೀಜಿ ಹಿರೇಕಲ್ಮಠದಲ್ಲಿ ಒಂದು ತಿಂಗಳ ಕಾಲ ಶ್ರಾವಣ ಮಾಸದ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದಿದ್ದು, ಮಂಗಳವಾರ ಮಹಾರಥೋತ್ಸವವನ್ನು ಮಠದ ದ್ವಾರ ಬಾಗಿಲಿನಿಂದ ಪಟ್ಟಣದ ವೀರ ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ಸಾವಿರಾರು ಭಕ್ತರು ಎಳೆದು ಪುನೀತರಾದದರು.

ಮಂಗಳವಾರ ಪ್ರಾತಃಕಾಲದಲ್ಲೇ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳ ಸಮ್ಮುಖದಲ್ಲಿ ಒಡೆಯರ್ ಮೃತ್ಯುಂಜಯ ಶ್ರೀ, ಚಂದ್ರಶೇಖರ್ ಶ್ರೀ ಕರ್ತೃಗದ್ದುಗೆಗಳಿಗೆ ಹಾಗೂ ವೀರಭದ್ರೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ದೀಪೋತ್ಸವ, ಮಹಾಮಂಗಳಾರತಿ ಪೂಜೆಗಳು ನಡೆದವು.
ನಂತರ ಹಿರೇಕಲ್ಮಠ ಆವರಣದಲ್ಲಿ ವೀರಭದ್ರೇಶ್ವರ ಕೆಂಡಾರ್ಚನೆ ನಡೆಯಿತು. ಈ ಸಮಯದಲ್ಲಿ ಭಕ್ತರು ಕೆಂಡಾರ್ಚನೆ ಹಾಯ್ದರು.

12 ಗಂಟೆಗೆ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳನ್ನು ಕುದುರೆಯಲ್ಲಿ ಕೂರಿಸಿ ಶ್ರೀ ಮಠದಿಂದ ಮಂಗಳವಾದ್ಯದದೊಂದಿಗೆ ಮಠದ ದ್ವಾರ ಬಾಗಿಲಿನ ಮುಂಭಾಗಕ್ಕೆ ಕರೆತಂದರು. ನಂತರ ಪಂಚಪೀಠದ ಧ್ವ್ವಜ, ಅಲಂಕೃತಗೊಂಡಿದ್ದ ಚನ್ನಪ್ಪಸ್ವಾಮೀಜಿ ಮಹಾರಥೋತ್ಸವಕ್ಕೆ ಪುರೋಹಿತರ ವೇದಮಂತ್ರಗಳ ಘೋಷಣೆಯೊಂದಿಗೆ ಮಹಾಪೂಜೆ, ರಥದ ಗಾಲಿಗೆ ಬಲಿ ಅನ್ನ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ನಡೆಸಲಾಯಿತು.

ಸ್ವಾಮೀಜಿ ರಥಾರೋಹಣ ಗೈಯುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಭಕ್ತರು ಮಾನವಧರ್ಮಕ್ಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂದು ಜೈಕಾರ ಕೂಗಿದರು.

ಮಹಾರಥೋತ್ಸದಲ್ಲಿ ಶಾಲಾ ಮಕ್ಕಳಿಂದ ಕೋಲಾಟ, ಜಾನಪದ ನೃತ್ಯ ನಡೆಯಿತು. ಕೀಲು ಕುದುರೆ, ಸಂಗೀತ ವಾದ್ಯಗಳು, ಗಜರಾಜನ ವಿವಿಧ ವಿನೋದಾವಳಿಗಳು ಮೆರವಣಿಗೆಯಲ್ಲಿ ಮೆರುಗು ನೀಡಿದವು.

ರಥೋತ್ಸವಕ್ಕೆ ಬಂದ ಸಾವಿರಾರು ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಹಾರಥೋತ್ಸವ ಉದ್ದಕ್ಕೂ ಭಕ್ತಾಧಿಗಳಿಗೆ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

ಮಹಾ ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿದ ಹಿನ್ನ್ನೆಲೆಯಲ್ಲಿ ಪೊಲೀಸ್‌ಇನ್ಸ್‌ಪೆಕ್ಟರ್ ಸಿದ್ದೇಗೌಡ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ರಥೋತ್ಸವಕ್ಕೆ ಪೂಜೆ ಮಾಡಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಹಿರೇಕಲ್ಮಠದ ಚನ್ನಯ್ಯ ಬೆನ್ನೂರುಮಠ, ಪುರಸಭಾ ಸದಸ್ಯ ಹೊಸಕೇರಿ ಸುರೇಶ್, ನಿವೃತ್ತ ಶಿಕ್ಷಕ ರುದ್ರಯ್ಯ, ಶಿವಕುಮಾರ್, ಶ್ರೀಮಠದ ವ್ಯವಸ್ಥಾಪಕ ಚನ್ನಬಸವಯ್ಯ, ಎಚ್.ಸಿ. ರವಿಕುಮಾರ್, ಕೆ.ಜಿ. ರುದ್ರಪ್ಪ, ರಾಜು ಪಲ್ಲವಿ, ಪೇಟೆ ಪ್ರಶಾಂತ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net