ಚನ್ನಪಟ್ಟಣ‌ ನಗರಸಭೆ ಅಕ್ರಮ ಖಾತೆ ಆರೋಪ ತನಿಖೆಗೆ ತಂಡ

24-5-rama-CMC CPT
Published on

ಚನ್ನಪಟ್ಟಣ

ಚನ್ನಪಟ್ಟಣ ನಗರಸಭೆಯಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಖಾತೆ ಹಾಗೂ ಅಧಿಕಾರಿ ವರ್ಗದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವ ಸಲುವಾಗಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಂಡವೊಂದನ್ನು ರಚಿಸಿ ಫೆ.7 ರ ಬುಧವಾರ ಆದೇಶ ಹೊರಡಿಸಿದ್ದಾರೆ‌.

ನಗರಸಭೆಯಲ್ಲಿ ಅಕ್ರಮ ಖಾತೆಗಳನ್ನು ಮಾಡಿಕೊಡಲಾಗುತ್ತಿದೆ. ಅಧಿಕಾರಿಗಳು ಈ ವಿಚಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಮಧ್ಯೆ ಪೌರಾಯುಕ್ತರ ವಿರುದ್ಧ ನಕಲಿ ಖಾತೆ ನೀಡಿರುವ ಗಂಭೀರ ಆರೋಪ ಕೇಳಿಬಂದಿತ್ತು. ನಗರಸಭೆಯ ಅಧ್ಯಕ್ಷ ಪಿ. ಪ್ರಶಾಂತ್ ಖುದ್ದು ಈ ಸಂಬಂಧಿಸಿದ ನಕಲಿ‌ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಇದರೊಂದಿಗೆ ಅಕ್ರಮ ಖಾತೆ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಹಲವಾರು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ತನಿಖೆಗೆ ಆದೇಶ ನೀಡಿದ್ದಾರೆ.

ಈ ಸಂಬಂಧ ಬುಧವಾರ ಆದೇಶ ಹೊರಡಿಸಿರುವ ಅವರು, ನಗರಸಭೆ ಅಧ್ಯಕ್ಷರು, ಸದಸ್ಯರು ಮತ್ತು ಸಾರ್ವಜನಿಕರಿಂದ ಬಂದಿರುವ ಪ್ರತಿದೂರಿಗೆ ಸಂಬಂಧಿಸಿದಂತೆ, ನಿಯಮಾನುಸಾರ ಪರಿಶೀಲಿಸಿ, ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿರುವ ಮತ್ತು ಪಂಚಾಯಿತಿಗಳಿಂದ ನಗರಸಭೆಗೆ ಹಸ್ತಾಂತರವಾದ ಅನಧಿಕೃತ ಸ್ವತ್ತುಗಳಿಗೆ (೧೧ಬಿ) ಮತ್ತು ನಗರಸಭೆಯ ಅನಧಿಕೃತ ಸ್ವತ್ತುಗಳಿಗೆ (ಕಟ್ಟಡ ಮತ್ತು ಖಾಲಿ ನಿವೇಶನಗಳಿಗೆ) ಇ - ಆಸ್ತಿ ತಂತ್ರಾಂಶದಲ್ಲಿ ಅಧಿಕೃತ ಸ್ವತ್ತು ಎಂದು ನೀಡಿರುವ ಪ್ರಕರಣಗಳು ಹಾಗೂ ಇತರೆ ದೂರು ಅಂಶಗಳ ಬಗ್ಗೆ ಪರಿಶೀಲಿಸಿ, ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ಸಲ್ಲಿಸಲು ತನಿಖಾ ತಂಡಕ್ಕೆ ಆದೇಶ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net