

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ನಗರದ ರೇಷ್ಮೆಗೂಡು ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದು, ಸ್ವಚ್ಛತೆ ಮಾಯವಾಗಿದೆ. ಪ್ರತಿನಿತ್ಯ ನೂರಾರು ರೈತರು ಬಂದು ಹೋಗುವ ಈ ಪ್ರಮುಖ ಸ್ಥಳ ಮೂಲಸೌಕರ್ಯ ಕೊರತೆಯಿಂದ ನಲುಗುತ್ತಿದೆ.
ನಗರದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿರುವ ಈ ಮಾರುಕಟ್ಟೆ ರೇಷ್ಮೆಗೂಡು ಮಾರಾಟಗಾರರ ಹಾಗೂ ಖರೀದಿದಾರರ ನೆಚ್ಚಿನ ಜಾಗ ಎಂದರೆ ತಪ್ಪೇನಿಲ್ಲ. ಸಣ್ಣ ಪ್ರಮಾಣದ ರೇಷ್ಮೆ ಬೆಳೆಗಾರರು ಹಾಗೂ ರೀಲರ್‌ಗಳು ಈ ಮಾರುಕಟ್ಟೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಕೇವಲ ತಾಲೂಕು ಅಲ್ಲದೇ, ನೆರೆಯ ಮಂಡ್ಯ ಸೇರಿ ರಾಜ್ಯದ ವಿವಿಧೆಡೆಯಿಂದ ರೇಷ್ಮೆ ಬೆಳೆಗಾರರು ಪ್ರತಿನಿತ್ಯ ಮಾರುಕಟ್ಟೆ ವಹಿವಾಟಿನಲ್ಲಿ ಭಾಗಿಯಾಗುತ್ತಾರೆ.
ಸ್ವಚ್ಛತೆ ಮರೀಚಿಕೆ!
ಪ್ರತಿನಿತ್ಯ ನೂರಾರು ರೇಷ್ಮೆ ಬೆಳೆಗಾರರು ಬಂದುಹೋಗುವ ಈ ಮಾರುಕಟ್ಟೆಯಲ್ಲಿ ಸ್ವಚ್ಛತೆ ಮಾಯವಾಗಿದೆ. ಮಾರುಕಟ್ಟೆ ಆವರಣ ಸೇರಿ ಎಲ್ಲಿಯೂ ಸ್ವಚ್ಛತೆ ಕಾಣಿಸುವುದಿಲ್ಲ. ಗೂಡು ಮಾರಾಟ ಮಾಡುವ ಸ್ಥಳ ಸೇರಿ ಎಲ್ಲೆಡೆ ಅನೈರ್ಮಲ್ಯ ತಾಂಡವವಾಡುತ್ತಿದೆ. ಇನ್ನು ಮಾರುಕಟ್ಟೆಯ ಹೊರಗಿನ ಆವರಣವಂತೂ ಗಿಡಗಂಟಿಗಳಿಂದ ಆವೃತವಾಗಿದೆ. ಮಾರುಕಟ್ಟೆ ಹಿಂಬದಿ ಇರುವ ಖಾಲಿ ಜಾಗದಲ್ಲಿ ಪೊದೆ ನಿರ್ಮಾಣವಾಗಿದ್ದು, ವಿಷಜಂತುಗಳ ವಾಸಸ್ಥಾನವಾಗಿದೆ. ಇನ್ನು ಪಾರ್ಕಿಂಗ್ ಸೇರಿ ಯಾವುದೇ ಶಿಸ್ತು ಸಹ ಮಾರುಕಟ್ಟೆಯಲ್ಲಿ ಇಲ್ಲವಾಗಿದೆ.
ಕನಿಷ್ಠ ಮೂಲಸೌಲಭ್ಯವಿಲ್ಲ!
ಈ ಮಾರುಕಟ್ಟೆಗೆ ದೂರದ ಊರುಗಳಿಂದ ಗೂಡು ತರುವ ರೈತರು ರಾತ್ರಿಯೇ ಬರುತ್ತಾರೆ. ಜತೆಗೆ ಪ್ರತಿದಿನ ರೈತರು, ರೀಲರ್‌ಗಳು ಸೇರಿ ನೂರಾರು ಮಂದಿ ಬಂದು ಹೋಗುತ್ತಾರೆ. ಇಂತಹ ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಇಲ್ಲ. ಇಲ್ಲಿರುವ ಶೌಚಗೃಹ ಗಬ್ಬು ನಾರುತ್ತಿದೆ. ಶುದ್ಧ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಶೌಚಗೃಹ ಸರಿಯಿಲ್ಲದ ಕಾರಣ ಮಾರುಕಟ್ಟೆಗೆ ಬರುವವರು ಮಾರುಕಟ್ಟೆಯ ಹೊರ ಆವರಣವನ್ನೇ ಮೂತ್ರ ವಿಸರ್ಜನೆಗೆ ಬಳಸುತ್ತಿದ್ದಾರೆ. ಕುಡಿಯುವ ನೀರಿನ ಸಣ್ಣ ಘಟಕವಿದ್ದರೂ ನಿರ್ವಹಣೆ ಇಲ್ಲ, ಪದೇಪದೇ ವಿದ್ಯುತ್ ಅಡಚಣೆ ತಲೆದೋರುತ್ತಿದ್ದು, ರೈತರು ಗೂಡು ಆರಿಸಿಕೊಳ್ಳಲು ಗಾಳಿ ವ್ಯವಸ್ಥೆ ಇಲ್ಲ. ಒಟ್ಟಾರೆ, ಈ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದೆ ಎಂದರೆ ತಪ್ಪಾಗಲಾರದು.
ಸಿಬ್ಬಂದಿ ಕೊರತೆ!
ಮಾರುಕಟ್ಟೆಯಲ್ಲಿ ಸ್ವಚ್ಛತೆ, ಮೂಲ ಸವಲತ್ತುಗಳ ಜತೆಗೆ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಮಾರುಕಟ್ಟೆಯಲ್ಲಿ ಸಹಾಯಕ ನಿರ್ದೇಶಕರು ಸೇರಿ 17 ಹುದ್ದೆಗಳಿವೆ. ಆದರೆ, ಪ್ರಸ್ತುತ 6 ಮಂದಿ ಮಾತ್ರ ಇದ್ದಾರೆ. ಇಡೀ ಮಾರುಕಟ್ಟೆಯಲ್ಲಿ ಇರುವುದು ಒಬ್ಬನೇ ಡಿ-ಗ್ರೂಪ್ ನೌಕರ. ಹೀಗಾಗಿ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಸಾಕಷ್ಟು ಅಡಚಣೆ ಉಂಟಾಗುತ್ತಿದೆ.
ಶಾಸಕರು ಗಮನ ಹರಿಸಬೇಕಿದೆ!
ಕೇವಲ ತಾಲೂಕು ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಬೇಕಾದ ನಗರದ ರೇಷ್ಮೆಗೂಡು ಮಾರುಕಟ್ಟೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆಗಳು ಸಹ ನಡೆದಿವೆ. ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅವರು ಮಾರುಕಟ್ಟೆಯನ್ನು ಸುಸ್ಥಿತಿಗೆ ತರುವತ್ತ ಗಮನಹರಿಸಿ ಜವಾಬ್ದಾರಿ ಮೆರೆಯಬೇಕಿದೆ.