

ಚನ್ನಪಟ್ಟಣ
ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದ ಅನ್ನಭಾಗ್ಯ ಪಡಿತರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಅಧಿಕಾರಿಗಳ ತಲೆದಂಡವಾಗಿದೆ.
ನಗರದ ಟಿಎಪಿಸಿಎಂಎಸ್ ಗೋದಾಮಿನಲ್ಲಿ 1600 ಕ್ವಿಂಟಾಲ್ ಗೂ ಹೆಚ್ಚು ಸರ್ಕಾರದ ಅನ್ನಭಾಗ್ಯ ಪಡಿತರ ದುರುಪಯೋಗವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಆಹಾರ ಶಿರಸ್ತೇದಾರ್ ಶಾಂತಕುಮಾರಿ ಹಾಗೂ ಆಹಾರ ನಿರೀಕ್ಷಕ ಕೆ.ಚೇತನ್ ಕುಮಾರ್ ಎಂಬುವವರನ್ನು ಸೇವೆಯಿಂದ ಅಮಾನತುಗೊಳಿಸಿ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾದ ವಾಸಿರೆಡ್ಡಿ ವಿಜಯ ಜ್ಯೋತ್ಸ್ಯ ಆದೇಶ ಹೊರಡಿಸಿದ್ದಾರೆ.
ಇಲಾಖೆಯ ನಿಯಮಾನುಸಾರ ಜಿಲ್ಲೆಯ ಉಪನಿರ್ದೇಶಕರು ಮತ್ತು ತಾಲೂಕು ಸಿಬ್ಬಂದಿಗಳು ಪ್ರತಿ ತಿಂಗಳು ಸಗಟು ಮಳಿಗೆಗಳಿಗೆ ಅನಿಯಮಿತವಾಗಿ ಭೇಟಿ ನೀಡಿ ತಪಾಸಣೆ ಮತ್ತು ಎತ್ತುವಳಿ ಕಾರ್ಯದ ಮೇಲುಸ್ತುವಾರಿ ಮಾಡಬೇಕಿದೆ.
ಜೊತೆಗೆ ಪ್ರತಿತಿಂಗಳ ಅಂತ್ಯದಲ್ಲಿ ಸಗಟುಮಳಿಗೆಗಳಲ್ಲಿ ಹಂಚಿಕೆಯಾದ ನಂತರ, ಉಳಿಕೆಯಾಗುವ ಅಂತಿಮ ದಾಸ್ತಾನಿನ ಪ್ರಮಾಣವನ್ನು ಸಂಬಂಧಪಟ್ಟ ಆಹಾರ ನಿರೀಕ್ಷಕರು ಹಾಗೂ ಆಹಾರ ಶಿರಸ್ತೇದಾರ್ ತಮ್ಮ ಧೃಡೀಕೃತ ಮಾಹಿತಿಯನ್ನು ಘೋಷಿಸಬೇಕಾಗಿರುತ್ತದೆ.
ಆದರೆ, ಇಷ್ಟೊಂದು ಪ್ರಮಾಣದ ಪಡಿತರ ದುರುಪಯೋಗವಾಗಿದ್ದರೂ ಸಹ, ಯಾವುದೇ ಮಾಹಿತಿ ಸಂಗ್ರಹಿಸದ ಈ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖೆ ಕ್ರಮಕೈಗೊಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ತಾಲೂಕು ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಮಾಡಿತ್ತು. ಆದರೆ, ಅಧಿಕಾರಿಗಳು ನೀಡಿರುವ ಸಮಜಾಯಿಷಿ ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಇಲಾಖೆಯ ಆಯುಕ್ತರು ಈ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ತಮ್ಮ ಆದೇಶ ಹೊರಡಿಸಿದ್ದಾರೆ.
ನಗರದ ಪ್ರತಿಷ್ಠಿತ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಬೆಳಕಿಗೆ ಬಂದಿದ್ದ ಲಕ್ಷಾಂತರ ಮೌಲ್ಯದ ಪಡಿತರ ನಾಪತ್ತೆ ಪ್ರಕರಣ ಸಾಕಷ್ಟು ಸಂಚಲನ ಮೂಡಿಸಿತ್ತು. ಆರಂಭದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ನೌಕರರೊಬ್ಬನನ್ನು ಬಂಧಿಸಲಾಗಿತ್ತು. ಇಷ್ಟೊಂದು ದೊಡ್ಡಮಟ್ಟದ ಅವ್ಯವಹಾರದಲ್ಲಿ ಅಧಿಕಾರಿಗಳ ಪಾತ್ರವೂ ಇದೇ ಎಂಬ ಮಾತುಗಳು ಕೇಳಿಬಂದಿದ್ದವು.