

ಚನ್ನಪಟ್ಟಣ
ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್ ತಮ್ಮ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ನಗರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಪಿ.ಪ್ರಶಾಂತ್, ಅಧ್ಯಕ್ಷ ಸ್ಥಾನದ ಜೊತೆಗೆ, ತಮ್ಮ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗೆ ತಮ್ಮ ರಾಜೀನಾಮೆ ಪತ್ರ ಬರೆದಿರುವ ಅವರು, ರಾಜೀನಾಮೆಯ ಕಾರಣವನ್ನು ಸಹ ಉಲ್ಲೇಖಿಸಿದ್ದಾರೆ. ಈ ವಿಚಾರವನ್ನು ಖುದ್ದು ಪ್ರಶಾಂತ್ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ನಮ್ಮ ಚನ್ನಪಟ್ಟಣ ನಗರಸಭೆಯಲ್ಲಿ ಭ್ರಷ್ಟಾಚಾರ ಮೀತಿಮೀರಿದೆ. ಈ ಬಗ್ಗೆ ನಾನು ಹಲವಾರು ಬಾರಿ ನಿಮ್ಮ ಕಚೇರಿ (ಜಿಲ್ಲಾಧಿಕಾರಿ) ಪತ್ರ ಬರೆದರೂ ನಿಮ್ಮಿಂದ ಯಾವುದೇ ಕ್ರಮವಾಗಿಲ್ಲ. ಈ ಮೂಲಕ ಪರೋಕ್ಷವಾಗಿ ನೀವು ಸಹ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿದ್ದೀರಿ. ನಗರಸಭೆಯ ಪೌರಾಯುಕ್ತ ಹಾಗೂ ಇಂಜಿನಿಯರ್ ಗಳು ನಗರಸಭೆಯ ಲಕ್ಷಾಂತರ ರೂಗಳನ್ನು ಲೂಟಿ ಮಾಡಿದ್ದಾರೆ. ಇದಕ್ಕೆ ನಿಮ್ಮ ಇಚ್ಚಾಶಕ್ತಿಯ ಕೊರತೆಯೂ ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ಅಧ್ಯಕ್ಷನಾಗಿದ್ದರೂ ಸಹ ನಾನು ನಗರಸಭೆ ಹಾಗೂ ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಅಸಹಾಯಕನಾಗಿದ್ದೇನೆ. ಜನರ ಹಕ್ಕುಗಳು ಮತ್ತು ನ್ಯಾಯವನ್ನು ರಕ್ಷಿಸಲು ವಿಫಲನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ನ್ಯಾಯವನ್ನು ಕಾಪಾಡಲು ವಿಫಲವಾಗಿರುವ ನಾನು ಅತ್ಯಂತ ದುಃಖ ಮತ್ತು ನೋವಿನಿಂದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮತ್ತು 26ನೇ ವಾರ್ಡ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಶಾಂತ್ ರಾಜೀನಾಮೆಗೆ ಪಕ್ಷದಲ್ಲಿನ ಒಳಜಗಳ, ಬಣ ರಾಜಕೀಯವೂ ಕಾರಣ ಎನ್ನುವ ಮಾತುಗಳು ಕೇಳಿಬಂದಿದೆ. ಜೆಡಿಎಸ್ ಪಕ್ಷದಿಂದ ೨೬ ನೇ ವಾರ್ಡ್ ನಿಂದ ಗೆದ್ದುಬಂದಿದ್ದ ಪಿ.ಪ್ರಶಾಂತ್, ಕಳೆದ ಎರಡು ವರ್ಷದ ಹಿಂದೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚನ್ನಪಟ್ಟಣ ನಗರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.