

ಚನ್ನಪಟ್ಟಣ
ರೈತರ ಉತ್ಪನ್ನಗಳಾದ ಹಾಲು, ರೇಷ್ಮೆ, ತೆಂಗು ಹಾಗೂ ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುವಂತೆ ಆಗ್ರಹಿಸಿ ಹಾಗೂ ಗೃಹ ಬಳಕೆ ವಿದ್ಯುತ್ ಬೆಲೆ ಏರಿಕೆ ಖಂಡಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕದಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತಾಲೂಕು ಕಚೇರಿ ಬಳಿ ಜಮಾಯಿಸಿದ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಗೂ ಮುನ್ನ ನಗರದ ಗಾಂಧಿಭವನದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.
ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಮಳೆ ಕೊರತೆ, ರೋಗಬಾಧೆ, ಬೆಳೆನಷ್ಟ, ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ರೈತರು ಹೈರಾಣಾಗಿದ್ದಾರೆ. ಪಶು ಆಹಾರದ ಬೆಲೆ ಗಗನಕ್ಕೇರಿದೆ. ಹಾಲು ಉತ್ಪಾದಕರು ಸಂಕಷ್ಟದಲ್ಲಿರುವಾಗ, ಹಾಲಿನ ಖರೀದಿ ದರ ಕಡಿಮೆ ಮಾಡಿರುವುದು ಖಂಡನೀಯ. ಹೈನುಗಾರಿಕೆ ಖರ್ಚು, ವೆಚ್ಚ ಸರಿದೂಗಿಸಲು ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು. ಪ್ರತಿ ಲೀಟರ್ ಹಾಲಿಗೆ ಕನಿಷ್ಠ 40 ರೂ. ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಲವು ತಿಂಗಳಿನಿಂದ ರೇಷ್ಮೆ ಬೆಲೆ ಸತತ ಕುಸಿತ ಕಂಡಿದೆ. ಇದರಿಂದಾಗಿ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಬರಬೇಕು. ಅಗತ್ಯ ಕ್ರಮಗಳನ್ನು ಕೈಗೊಂಡು ರೇಷ್ಮೆ ಬೆಲೆ ಕುಸಿತವನ್ನು ತಡೆಗಟ್ಟಬೇಕು. ಗೃಹಬಳಕೆ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಆದರೆ ಸರ್ಕಾರ ಕಂಡೂ ಕಾಣದಂತೆ ಜಾಣ ಮೌನಕ್ಕೆ ಶರಣಾಗಿದೆ. ಸರ್ಕಾರ ವಿದ್ಯುತ್ ದರ ಇಳಿಸಬೇಕು ಎಂದರು.
ರೈತ ಸಂಘದ ಮಹಿಳಾ ಘಟಕದ ರಾಜ್ಯ ಸಂಚಾಲಕಿ ರಮ್ಯ ರಾಮಣ್ಣ, ಜಿಲ್ಲಾಧ್ಯಕ್ಷ ಮುನಿರಾಜು, ತಾಲೂಕು ಅಧ್ಯಕ್ಷ ರಾಮೇಗೌಡ, ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ, ತಾಲೂಕು ಕಾರ್ಯದರ್ಶಿ ಕೋದಂಡರಾಮು, ಉಪಾಧ್ಯಕ್ಷ ವಿಜಯ್‌ಕುಮಾರ್, ರೈತ ಮುಖಂಡರಾದ ಸುಜೀವನ್ ಕುಮಾರ್ ಮತ್ತಿತರು ಇದ್ದರು.
ತೆಂಗು, ಕೊಬ್ಬರಿಗೆ ವೈಜ್ಞಾನಿಕ ಬೆಲೆ
ತೆಂಗು ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು, ಇತ್ತೀಚೆಗೆ ತೆಂಗು ಮತ್ತು ಕೊಬ್ಬರಿ ಬೆಲೆ ಕುಸಿತ ಕಂಡಿದೆ. ಈ ಹಿಂದೆ ತೆಂಗಿನಕಾಯಿ ಕೆ.ಜಿ.ಗೆ 40 ರೂ. ಇತ್ತಾದರೂ ಇದೀಗ 30ರ ಆಸುಪಾಸಿಗೆ ಕುಸಿದಿದೆ. ಸರ್ಕಾರ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 20 ಸಾವಿರ ರೂ. ಹಾಗೂ ತೆಂಗಿನಕಾಯಿಗೆ ಪ್ರತಿ ಕ್ವಿಂಟಾಲ್‌ಗೆ 3,500 ರೂ. ನಿಗದಿಗೊಳಿಸಬೇಕು ಎಂದು ಮಲ್ಲಯ್ಯ ಒತ್ತಾಯಿಸಿದರು.
ಅರಣ್ಯ ಪ್ರದೇಶದಲ್ಲಿ ರೆಸಾರ್ಟ್‌ಗೆ ಕಡಿವಾಣ ಅಗತ್ಯ
ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಪ್ರಾಣಿಗಳು ಹಾಳು ಮಾಡುತ್ತಿವೆ. ಜಮೀನುಗಳಿಗೆ ಲಗ್ಗೆ ಇಡುತ್ತಿದ್ದ ಪ್ರಾಣಿಗಳು ಈಗ ಜನವಸತಿ ಪ್ರದೇಶಕ್ಕೂ ದಾಳಿ ಮಾಡುತ್ತಿದ್ದು, ಸಾಕುಪ್ರಾಣಿಗಳನ್ನು ಬಲಿ ಪಡೆಯುತ್ತಿವೆ. ಅರಣ್ಯ ವ್ಯಾಪ್ತಿಯಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸಿ ಕಾಡುಗಳನ್ನು ನಾಶ ಮಾಡುತ್ತಿರುವುದರಿಂದ ಕಾಡು ಪ್ರಾಣಿಗಳು ನಾಡಿನತ್ತ ಧಾವಿಸುತ್ತಿವೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿನ ರೆಸಾರ್ಟ್‌ಗಳಿಗೆ ಕಡಿವಾಣ ಹಾಕಿ ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.