ಚನ್ನಮ್ಮಳ ಜೀವನ ಮತ್ತು ಸಾಧನೆ ಪ್ರೇರಕ ಶಕ್ತಿ

23 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ದೇಶದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ್ದ ರಾಣಿ ಚನ್ನಮ್ಮ ಇಂದಿನ ಮಹಿಳೆಯರಿಗೆ ಆದರ್ಶ ಪ್ರಾಯರಾಗಿದ್ದಾರೆ. ಅವರ ಹೋರಾಟ, ಧೈರ್ಯ, ಸ್ಥೆರ್ಯ ಮತ್ತು ಸ್ವಾಭಿಮಾನ ಪ್ರತಿ ಮಹಿಳೆಯಲ್ಲಿ ಇರಬೇಕು. ಚನ್ನಮ್ಮನ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಪ್ರೇರಕ ಶಕ್ತಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್​ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿಕ್ಕಂದಿನಿಂದಲೇ ಕುದುರೆ ಸವಾರಿ, ಕತ್ತಿ ವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದ ಚನ್ನಮ್ಮಳು, ಕಿತ್ತೂರಿನ ದೇಸಾಯಿ ಮನೆತನದ ರಾಜಾ ಮಲ್ಲಸರ್ಜನನ್ನು 15ನೇ ವಯಸ್ಸಿನಲ್ಲಿ ವಿವಾಹವಾದರು. ಮಲ್ಲಸರ್ಜನ ನಿಧನ ನಂತರ ಕಿತ್ತೂರು ಸಂಸ್ಥಾನದ ಆಡಳಿತ ಚುಕ್ಕಾಣಿ ಹಿಡಿದ ಚನ್ನಮ್ಮಳು ಸ್ವಾಭಿಮಾನದಿಂದ ಸ್ವಾತಂತ್ರ್ಯಕ್ಕೆ ಹೋರಾಡಿ ಇತಿಹಾಸ ಸೃಷ್ಟಿಸಿದಳು. ಕಿತ್ತೂರಿನ ವಿಜಯೋತ್ಸವಕ್ಕೆ 200 ವರ್ಷಗಳು ತುಂಬಿರುವ ಪ್ರಯುಕ್ತ, ಚನ್ನಮ್ಮಳ ಸ್ಮರಣೆ ಮತ್ತು ಕಿತ್ತೂರಿನ ಇತಿಹಾಸವನ್ನು ನಾಡಿನೂದ್ದಕ್ಕೂ ಪಸರಿಸಿ, ಕೀರ್ತಿ ಹರಡಲು ರಾಜ್ಯ ಸರ್ಕಾರವು ಕಿತ್ತೂರು ವಿಜಯೋತ್ಸವದ ಜ್ಯೋತಿ ರಥ ಯಾತ್ರೆ ಹಮ್ಮಿಕೊಂಡಿದೆ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮತ್ತು ಚಿಂತಕ ಮಡಿವಾಳಪ್ಪ ಶಿರಿಯಣ್ಣವರ ಅವರು ಕಿತ್ತೂರು ರಾಣಿ ಚನ್ನಮ್ಮ ಜೀವನ ಮತ್ತು ಸಾಧನೆ ಬಗ್ಗೆ ಉಪನ್ಯಾಸ ನೀಡಿದರು. ಸಹಾಯಕ ಪೊಲೀಸ್​ ಆಯುಕ್ತ ಪ್ರಶಾಂತ ಸಿದ್ದನಗೌಡರ, ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ, ಸಿ.ಎಸ್​. ಪಾಟೀಲ, ಸಿ.ಎಸ್​. ನೇಗಿನಾಳ, ರಾಜು ಮಟ್ಟಿ, ಎನ್​.ಆರ್​.ಬಾಳಿಕಾಯಿ, ಇತರರು ಇದ್ದರು.

ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಕಾಮಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net