ಪ್ರಥಮ ಸ್ವಾತಂತ್ರೃ ಹೋರಾಟಗಾರ್ತಿ ಚನ್ನಮ್ಮ

25 LXR 5
Published on

ಲಕ್ಷ್ಮೇಶ್ವರ/ ಶಿಗ್ಲಿ: ಭಾರತದ ಸ್ವಾತಂತ್ರೃ ಸಂಗ್ರಾಮದ ಬೆಳ್ಳಿಚುಕ್ಕಿ. ಕಿತ್ತೂರು ರಾಣಿ ಚನ್ನಮ್ಮ. ನೆಲ, ಜಲ, ಸಂಪತ್ತಿನ ಸಂರಕ್ಷಣೆ ಹಾಗೂ ಸ್ವಾಭಿಮಾನಕ್ಕಾಗಿ ಜೀವನವನ್ನೇ ಸಮರ್ಪಿಸಿಕೊಂಡ ಪ್ರಥಮ ಸ್ವಾತಂತ್ರೃ ಹೋರಾಟಗಾರ್ತಿ ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮೀಜಿಗಳು ಬಣ್ಣಿಸಿದರು.

ಶುಕ್ರವಾರ ಶಿಗ್ಲಿ ಗ್ರಾಮದಲ್ಲಿ ವೀರರಾಣಿ ಚನ್ನಮ್ಮಾಜಿಯ ವಿಜಯೋತ್ಸವ ಮತ್ತು ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಸ್ವಾತಂತ್ರೃದ ಕ್ರಾಂತಿಯ ಕಹಳೆ ಮೊಳಗಿಸಿದ ಚನ್ನಮ್ಮ ಕನ್ನಡ ನಾಡಿನ ಹೆಮ್ಮೆ. ಚನ್ನಮ್ಮಳ ದೇಶಪ್ರೇಮ, ಶೌರ್ಯ, ಸಾಹಸ ಯುವ ಪೀಳಿಗೆಗೆ ಆದರ್ಶವಾಗಬೇಕು. ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಚನ್ನಮ್ಮನಂತಹ ವೀರ ಮಹನೀಯರ ಚರಿತ್ರೆಯನ್ನು ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು.

ಚನ್ನಮ್ಮಳಂತಹ ವೀರ ಮಹಿಳೆಯಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನ, ಗೌರವ ಸಿಗುವಂತಾಗಿದೆ. ಚನ್ನಮ್ಮ ಯಾವುದೇ ಒಂದು ಸಮಾಜಕ್ಕೆ ಸೀಮಿತವಲ್ಲ. ಕೇವಲ ಜಯಂತಿ, ವಿಜಯೋತ್ಸವಗಳಿಗೆ ಚನ್ನಮ್ಮನ ಸ್ಮರಣೆ ಸೀಮಿತವಾಗದೆ ವರ್ಷದುದ್ದಕ್ಕೂ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕರೆ ನೀಡಿದರು.

ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ಸೋಮಶೇಖರ ಕೆರಿಮನಿ ಉಪನ್ಯಾಸ ನೀಡಿ, ಸ್ವಾತಂತ್ರೃ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಕೀರ್ತಿ ವೀರರಾಣಿ ಕಿತ್ತೂರು ಚನ್ನಮ್ಮಳಿಗೆ ಸಲ್ಲುತ್ತದೆ, 1824ರಲ್ಲಿ ಬ್ರಿಟಿಷರ ವಿರುದ್ಧದ ಹೋರಾಟ 1857ರ ಪ್ರಥಮ ಸ್ವಾತಂತ್ರೃ ಚಳವಳಿಗೆ ಸ್ಫೂರ್ತಿಯಾಗಿದ್ದು, ಚನ್ನಮ್ಮ ಪ್ರಥಮ ಸ್ವಾತಂತ್ರೃ ಹೋರಾಟಗಾರ್ತಿ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚಮಸಾಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಸೋಮಣ್ಣ ಡಾಣಗಲ್ ಪ್ರಾಸ್ತಾವಿಕವಾಗಿ ನುಡಿದರು. ಲೋಕಾಯುಕ್ತ ಎಸ್‌ಪಿ ಶಂಕರ ಎಂ. ರಾಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ರಾಜ್ಯ ಉಪಾಧ್ಯಕ್ಷ ಎಫ್.ಸಿ. ಮರಿಗೌಡ್ರ, ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಟಿ, ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಆರ್.ಎಂ. ಹೊನಕೇರಿ, ಗ್ರಾಪಂ ಅಧ್ಯಕ್ಷೆ ಸಂಗೀತಾ ಪೂಜಾರ, ಸಿದ್ದಣ್ಣ ಯಲಿಗಾರ, ನಿಂಗಪ್ಪ ಹುನಗುಂದ, ಎಚ್.ಎಫ್. ತಳವಾರ, ಎಚ್.ಎಫ್. ಗುಡೂರ, ಅಶೋಕ ಶಿರಹಟ್ಟಿ, ಡಿ.ವೈ. ಹುನಗುಂದ, ಬಸಣ್ಣ ಹಂಜಿ, ರಾಮಣ್ಣ ಲಮಾಣಿ ಡಾ.ಬಿ.ವಿ. ಮೇಲ್ಮುರಿ, ಅಜ್ಜಪ್ಪ ಕರ್ಜಕಣ್ಣವರ, ಮುದಕಣ್ಣ ಗಡಾದ, ಚನ್ನಪ್ಪ ಹುನಗುಂದ, ಪ್ರವೀಣ ಕಾಳಪ್ಪನವರ, ಮಂಜುನಾಥ ಇಚ್ಚಂಗಿ ಅನೇಕರಿದ್ದರು. ಈರಣ್ಣ ಅಕ್ಕೂರ, ಎನ್.ಕೆ. ಹತ್ತಿಕಾಳ, ಬಿ.ಬಿ. ಬಳಿಗಾರ ನಿರ್ವಹಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net