

ಹುಣಸೂರು : ಕಿತ್ತೂರು ರಾಣಿ ಚನ್ನಮ್ಮ ಕನ್ನಡಿಗರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿದ ಮೊದಲ ಮಹಿಳೆ ಹಾಗೂ ಅಂದಿನ ಕಾಲದಲ್ಲೇ ಜನರ ಮನದಲ್ಲಿ ಶಾಶ್ವತ ಸ್ಥಾನ ಗಳಿಸಿದ ಜನಪದ ನಾಯಕಿ ಆಗಿದ್ದರೆಂದು ತಹಸೀಲ್ದಾರ್ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ರೀತಿ, ತೋರಿದ ಶೌರ್ಯ, ಸಾಹಸಗಳ ಮೂಲಕ 18ನೇ ಶತಮಾನದಲ್ಲಿ ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರ ಬಾಯಲ್ಲಿ ಧೀರಮಹಿಳೆಯಾಗಿ ಕಥೆ, ಕವನಗಳಲ್ಲಿ ವಿಜೃಂಬಿಸುವ ಮೂಲಕ ಜನಪದ ನಾಯಕಿ ಎನ್ನುವ ಹೆಗ್ಗಳಿಕೆ ಪಡೆದಿದ್ದರು. ಡಾಲ್‌ಹೌಸಿಯ ದತ್ತುಮಕ್ಕಳಿಗೆ ಹಕ್ಕಿಲ್ಲವೆನ್ನುವ ಕಾನೂನನ್ನು ಉಲ್ಲಂಘಿಸುವ ಧೈರ್ಯ ತೋರಿ ಬ್ರಿಟಿಷರ ಆಡಳಿತಕ್ಕೆ ಸಡ್ಡು ಹೊಡೆದಿದ್ದರು. ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿ ಅದು ಜ್ವಾಲೆಯಾಗಿ ಬೆಳಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಚನ್ನಮ್ಮನ ನಂಬಿಕಸ್ತನಾಗಿ ಸಂಗೊಳ್ಳಿ ರಾಯಣ್ಣ ಕೂಡ ತನ್ನ ಹೋರಾಟದ ಮೂಲಕ ಜನಮಾನಸದಲ್ಲಿ ನೆಲೆ ನಿಂತರು. ವಿದೇಶಿಯರ ಆಡಳಿತದಿಂದ ಮುಕ್ತರಾಗಬೇಕೆನ್ನುವ ಚನ್ನಮ್ಮನ ಕನಸು ಮತ್ತು ಹೋರಾಟ ಇಂದಿಗೂ ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.
ಶಿರಸ್ತೇದಾರ್ ಶ್ರೀಪಾದ್ ನಲವತ್ತ್‌ವಾಡಕರ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು, ನಗರಠಾಣೆ ಎಸ್‌ಐ ಜಮೀರ್ ಅಹಮದ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಧರ್ಮಾಪುರ ಕಾಳಪ್ಪ, ಚಲುವರಾಜ್, ಕಾಯಕ ಸಮಾಜದ ಮುಖಂಡ ಹೊನ್ನಪ್ಪ, ದೇವರಾಜ್, ಶಂಕರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎಸ್.ಜಯರಾಂ, ಪಿ.ಆರ್.ರಾಚಪ್ಪ ಇತರರು ಇದ್ದರು.