

ಹುಬ್ಬಳ್ಳಿ: ಇಲ್ಲಿಯ ಕಿತ್ತೂರ ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ಗಾ ಮೈದಾನ) ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ದರ್ಶನಕ್ಕೆ ಜನಸಾಗರ ಹರಿದುಬರುತ್ತಿದೆ.
ಇದರ ಮಧ್ಯೆ ಸೋಮವಾರ ಬೆಳಗ್ಗೆ 6ಕ್ಕೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗ ನಮಸ್ಕಾರ ಜರುಗಿತು. 9ಕ್ಕೆ ಮಹಾಪೂಜೆ, 10.30ಕ್ಕೆ ಗಣಹೋಮ, 11.30ರಿಂದ ಸಂಜೆ 4.30ರವರೆಗೆ ನಿರಂತರ ಭಜನೆ, ಮಹಾ ಆರತಿ, ಸಂಘದ ಘೋಷ ವಾದನ, ಗಂಗಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಶನಿವಾರ ಬೆಳಗ್ಗೆ 8ಕ್ಕೆ ಮೂರುಸಾವಿರ ಮಠದಿಂದ ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಚನ್ನಮ್ಮ ಮೈದಾನಕ್ಕೆ ತಂದು ನಿಶ್ಚಿತ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಬೆಳಗ್ಗೆ 10.30ಕ್ಕೆ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ಸಂಜೆ 6ಕ್ಕೆ ಮಹಾಮಂಗಳಾರತಿ, 7ಕ್ಕೆ ವಾರ್ಕರಿ ಸಂಪ್ರದಾಯದವರಿಂದ ಭಜನೆ, ರಾತ್ರಿ 8ಕ್ಕೆ ಗಂಗಾರತಿ ನಡೆಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಎಂಎಲ್‌ಸಿ ಪ್ರದೀಪ ಶೆಟ್ಟರ್ ಸೇರಿದಂತೆ ಇತರರು ಆಗಮಿಸಿ ಗಣೇಶ ದರ್ಶನ ಪಡೆದರು. ಕೆಲ ನಾಯಕರು ಭಜನೆ ಕೂಡ ಮಾಡಿದರು.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸುತ್ತಲಿನ ಜಿಲ್ಲೆಗಳ ಭಕ್ತರು ಕೂಡ ಆಗಮಿಸಿ ಗಣಪತಿಯ ದರ್ಶನ ಪಡೆದರು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸ್ವಾಗತ ಸಮಿತಿ ನೇತೃತ್ವದಲ್ಲಿ ಪ್ರತಿಷ್ಠಾಪನಾ ಸಮಿತಿ, ವಿಸರ್ಜನಾ ಸಮಿತಿ, ಮೆರವಣಿಗೆ ಸಮಿತಿ ಸೇರಿದಂತೆ 8 ಸಮಿತಿ ರಚಿಸಲಾಗಿದೆ. ಇವೆಲ್ಲವೂ ತನ್ನ ಕಾರ್ಯವ್ಯಾಪ್ತಿಯ ಕೆಲಸಗಳನ್ನು ಮಾಡುತ್ತಿವೆ. ಬಂದೋಬಸ್ತ್‌ಗಾಗಿ 140 ಅರೆಸೇನಾ ಪಡೆ ಸಿಬ್ಬಂದಿ, 75 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಸರ್ಜನೆ ಇಂದು: ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳವತಿಯಿಂದ ಪ್ರತಿಷ್ಠಾಪಿಸಲಾಗಿರುವ ಈ ಗಣೇಶ ಮೂರ್ತಿಯ ವಿಸರ್ಜನೆ ಸೆ. 9ರಂದು ನಡೆಯಲಿದೆ. ಬೆಳಗ್ಗೆ 9ಕ್ಕೆ ಮಹಾ ಮಂಗಳಾರತಿ, 9.30ಕ್ಕೆ ಸವಾಲು, 11.45ಕ್ಕೆ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಸಂಜೆ 4.30ರೊಳಗೆ ಇಂದಿರಾ ಗಾಜಿನ ಮನೆ ಪಕ್ಕದ ಬಾವಿಯಲ್ಲಿ ವಿರ್ಸಜನೆಯಾಗಲಿದೆ. ಮೆರವಣಿಗೆಗೆ ಆರ್‌ಎಸ್‌ಎಸ್ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಚಾಲನೆ ನೀಡುವರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮುಖ್ಯ ಭಾಷಣ ಮಾಡುವರು. ಸ್ವಾಗತ ಸಮಿತಿ ಅಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ, ಮಹಾಮಂಡಳ ಅಧ್ಯಕ್ಷ ಸಂಜೀವ ಬಡಸ್ಕರ್ ಇತರರು ಉಪಸ್ಥಿತರಿರುವರು.