

ಹುಬ್ಬಳ್ಳಿ: ನಗರದ ಕಿತ್ತೂರ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ವಿಸರ್ಜನೆ ಸೆ. 21ರಂದು ನೆರವೇರಲಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಬಿಜೆಪಿಯ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11.45ಕ್ಕೆ ಚನ್ನಮ್ಮ ಮೈದಾನದಿಂದ ಆರಂಭವಾಗುವ ವಿಸರ್ಜನಾ ಮೆರವಣಿಗೆಯು ಹಳೇ ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ ಮಾರ್ಗವಾಗಿ ಇಂದಿರಾ ಗಾಜಿನ ಮನೆ ಪಕ್ಕದ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದರು.
ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಸಲುವಾಗಿ ನಡೆದ ಹೋರಾಟ ಸ್ಮರಿಸಿದ ಅವರು, ಪ್ರತಿಭಟನೆ ವೇಳೆ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿರಲಿಲ್ಲ. ಮನವಿ ಮಾಡಲು ಒಳಗೆ ಹೋಗಿದ್ದೆವು. ಆಯುಕ್ತರ ಕಚೇರಿಯಲ್ಲಿ ಯಾವುದೇ ಘೊಷಣೆ ಕೂಗಿಲ್ಲ. ಪಾಲಿಕೆ ಆಯುಕ್ತರ ಮೇಲೆ ಸರ್ಕಾರ ಹಿಡಿತ ಸಾಧಿಸಿತ್ತು. ಹೀಗಾಗಿ ನಾವು ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಮಾಡುವುದು ಅನಿವಾರ್ಯಾಗಿತ್ತು ಎಂದರು.
ಕಳೆದ ವರ್ಷದ ಗಣೇಶೋತ್ಸವದಲ್ಲಿ ಹುಂಡಿ ಹಣದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಗಜಾನನ ಉತ್ಸವ ಸಮಿತಿ ಅಧ್ಯಕ್ಷರು ಈಗಾಗಲೇ ಸಮಜಾಯಿಷಿ ನೀಡಿದ್ದಾರೆ. ಇನ್ನೂ ಅನುಮಾನ ಇದ್ದರೆ ಖುದ್ದಾಗಿ ಹೋಗಿ ದಾಖಲೆಗಳನ್ನು ಪರಿಶೀಲಿಸಬಹುದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಯನ್ನು ವಿರೋಧಿಸುವ ಹಕ್ಕು ಅಂಜುಮನ್ ಸಂಸ್ಥೆಗೆ ಇಲ್ಲ. ಕಳೆದ ಬಾರಿಯೂ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ಅವರಿಗೆ ಮುಖಭಂಗವಾಗಿತ್ತು. ಆದರೂ ಈ ಬಾರಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂಜುಮನ್ ಸಂಸ್ಥೆಗೆ ಕಾಂಗ್ರೆಸ್ ಬೆಂಬಲವಿದೆ. ಈವರೆಗೂ ನಾವು ಅವರ ಹಬ್ಬಗಳಿಗೆ ತೊಡಕು ಮಾಡಿಲ್ಲ. ನಮಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಸಂಸತ್ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿದೆ. ಇದು ಜಾರಿಗೆ ಬರುವುದು ತಡವಾಗಬಹುದು. ಆದರೆ ಶೀಘ್ರವಾಗಿ ಕಾರ್ಯರೂಪಕ್ಕೆ ತರುವ ಛಾತಿ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಕಾಂಗ್ರೆಸ್ನವರು ಬರೀ ಮಾತನಾಡುತ್ತಾರೆ ಎಂದು ಶಾಸಕರಾದ ಅರವಿಂದ ಬೆಲ್ಲದ ಮತ್ತು ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.
ಎಂಎಲ್ಸಿ ಪ್ರದೀಪ ಶೆಟ್ಟರ್, ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ, ವೀರಣ್ಣ ಸವಡಿ, ಪ್ರಮುಖರಾದ ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಪ್ರಭು ನವಲಗುಂದಮಠ ಇದ್ದರು.
ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ರಾಜ್ಯ ಸರ್ಕಾರವು ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ. ಬಿಜೆಪಿ ಕಚೇರಿಯಿಂದ ಫೋನ್ ಹೋಗಿರುವುದು ಚರ್ಚೆಯಾಗುತ್ತದೆ. ಆದರೆ, ಬಿಜೆಪಿ ಕಚೇರಿಗೆ ಅನೇಕರು ಬರುತ್ತಾರೆ, ಹೋಗುತ್ತಾರೆ. ಯಾರು ಫೋನ್ ಮಾಡಿದ್ದಾರೆ ಎಂಬುದು ತಿಳಿಯುವುದಿಲ್ಲ. ತನಿಖೆಯಿಂದ ಎಲ್ಲವೂ ಹೊರಬರಲಿ.
-ಅರವಿಂದ ಬೆಲ್ಲದ, ಶಾಸಕ