ಏ.6ರಂದು ಚನ್ನಕೇಶವಸ್ವಾಮಿ ರಥೋತ್ಸವ

23blrp1
Published on

ಬೇಲೂರು: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಭಕ್ತರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಏ.6ರಂದು ರಥೋತ್ಸವ ನಡೆಯಲಿದ್ದು, ಮಾ.28ರಿಂದ 15 ದಿನಗಳ ಕಾಲ ಕಾರ್ಯಕ್ರಮಗಳು ಸಂಪ್ರದಾಯ ಬದ್ಧವಾಗಿ ನಡೆಯಬೇಕಿದೆ. ಈ ಹಿಂದೆ ನಡೆದ ರಥೋತ್ಸವ ಅಚ್ಚುಕಟ್ಟಾಗಿ ನಡೆದಿತ್ತು. ಆದರೆ ಈ ಬಾರಿ ವ್ಯವಸ್ಥಾಪನಾ ಸಮಿತಿ ಸದಸ್ಯರ ಅವಧಿ ಮುಗಿದಿರುವುದರಿಂದ ಜಿಲ್ಲಾಧಿಕಾರಿ, ತಾಲೂಕು ಆಡಳಿತ ಹಾಗೂ ಸಾರ್ವಜನಿಕರನ್ನೊಳಗೊಂಡಂತೆ ಪೂರ್ವಭಾವಿ ಸಭೆ ಕರೆದು ಚಿರ್ಚಿಸಲಾಗುವುದು ಎಂದು ಹೇಳಿದರು.

ಸರ್ಕಾರ ಜಾರಿಗೆ ತಂದಿರುವ ಸಪ್ತಪದಿ ವಿವಾಹ ಕಾರ್ಯಕ್ರಮ ಏ.24ರಂದು ನಡೆಯಲಿದ್ದು, ಹತ್ತು ಜೋಡಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಬಂದಲ್ಲಿ ಅವರ ಹೆಸರನ್ನು ವಿವಾಹಕ್ಕೆ ಅಧಿಕಾರಿಗಳು ಪರಿಗಣಿಸಬೇಕು ಎಂದರು.

ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ.ಟಿ.ದಾಮೋಧರ್ ಮಾತನಾಡಿ, ಸಮಿತಿ ಅಸ್ತಿತ್ವಕ್ಕೆ ಬಂದಾಗಿನಿಂದ ಭಕ್ತರ ಅನುಕೂಲಕ್ಕಾಗಿ ಹಲವಾರು ಕೆಲಸಗಳನ್ನು ಮಾಡಿದೆ. ದಿ.ವೈ.ಎನ್.ರುದ್ರೇಶ್‌ಗೌಡರು, ಶಾಸಕ ಕೆ.ಎಸ್.ಲಿಂಗೇಶ್ ಸೇರಿದಂತೆ ಎಲ್ಲರೂ ಸಹಕಾರ ನೀಡಿದ್ದಾರೆ. ಉಳಿದ ಕೆಲಸಗಳನ್ನು ಮುಂದಿನ ಸಮಿತಿಯವರು ಮುಂದುವರಿಸಲಿ ಎಂದರು.

ದೇಗುಲ ಕಾರ್ಯ ನಿರ್ವಹಣಾಧಿಕಾರಿ ವಿದ್ಯುಲತಾ, ಪ್ರಧಾನ ಅರ್ಚಕ ಕೃಷ್ಣಸ್ವಾಮಿ ಭಟ್ಟರ್, ಸಮಿತಿ ಸದಸ್ಯರಾದ ರವೀಶ್, ವೆಂಕಟೇಗೌಡ, ಸಂಕಲ್ಪ, ರತ್ನಾ ಸತ್ಯನಾರಾಯಣ, ಜಗದೀಶ್, ವೆಂಕಟೇಶ್, ಕೇಶವಮೂರ್ತಿ, ರಾಜು ದೇಗುಲದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net