ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ

DAVANAGERE(1)
Published on

ಚನ್ನಗಿರಿ: ಕ್ರೀಡಾಸಕ್ತ ಯುವಕ-ಯುವತಿಯರು ತಾಲೂಕಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಇವರಿಗೆ ಅನುಕೂಲವಾಗುವಂತೆ 5 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತದೆ. ಅದಕ್ಕಾಗಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು. ತಾಲೂಕು ಕ್ರೀಡಾಂಣಗದಲ್ಲಿ ಗುರುವಾರ ಮಹಿಳಾ ವ್ಯಾಯಾಮ ಶಾಲೆ ಉದ್ಘಾಟಿಸಿ ಮಾತನಾಡಿ, ಹಣದಿಂದ ಬಹುತೇಕ ಎಲ್ಲವನ್ನು ಖರೀದಿಸಬಹುದು. ಆದರೆ, ಆರೋಗ್ಯ ಪಡೆಯಲು ಸಾಧ್ಯವಿಲ್ಲ. ದೇಹವನ್ನು ದಂಡಿಸುವ ಮೂಲಕ ದೃಢಕಾಯ ಮತ್ತು ಆರೋಗ್ಯವಂತರಾಗಿರಲು ಸಾಧ್ಯವಿದೆ ಎಂದು ಹೇಳಿದರು.

ಯುವಕರು ದೇಹವನ್ನು ಸದೃಢವಾಗಿಟ್ಟುಕೊಳ್ಳಲು ವ್ಯಾಯಾಮ, ವಾಯುವಿಹಾರ, ಜಿಮ್‌ಗೆ ಹೋಗುತ್ತಾರೆ. ಆದರೆ, ಮಹಿಳೆಯರಿಗೆ ಮನೆಗೆಲಸದಲ್ಲೇ ದಿನ ಕಳೆದು ಹೋಗುತ್ತದೆ. ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ, ಅವರ ಆರೋಗ್ಯ ದೃಷ್ಟಿಯಿಂದ ಪಟ್ಟಣದಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಅತ್ಯಾಧುನಿಕ ಮಹಿಳಾ ವ್ಯಾಯಾಮ ಶಾಲೆ ಆರಂಭಿಸಲಾಗಿದೆ ಎಂದು ಹೇಳಿದರು. ಇದು ದಾವಣಗೆರೆ ಜಿಲ್ಲೆಯಲ್ಲೇ ಪ್ರಥಮ ಮಹಿಳಾ ವ್ಯಾಯಾಮ ಶಾಲೆಯಾಗಿದೆ. ಮಹಿಳೆಯರು ವಾಯುವಿಹಾರ ಮಾಡಲು ಕೆರೆ ಸುತ್ತ ವಾಕಿಂಗ್ ಪಾಥ್ ನಿರ್ಮಿಸಲಾಗಿದೆ. ಕೆರೆಯನ್ನು ಮತ್ತಷ್ಟು ಸುಂದರಗೊಳಿಸಲು ಕಾರಂಜಿ, ಆಸನ, ತಡೆಬೇಲಿಗಳ ನಿರ್ಮಾಣಕ್ಕೆ 2 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದುರು.

ಕ್ರೀಡಾ ಇಲಾಖೆ ಜಿಲ್ಲಾ ನಿರ್ದೇಶಕಿ ಸುಚೇತನ, ಸಿಪಿಐ ಪಿ.ಬಿ.ಮಧು, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ, ಉಪಾಧ್ಯಕ್ಷೆ ಜರಿನಾಬೀ, ಸ್ಥಾಯಿ ಸಮಿತಿ ಅಧ್ಯಕ್ಷ ಅಸ್ಲಾಂಬೇಗ್, ಸದಸ್ಯರಾದ ಪಾರಿ ಪರಮೇಶ್, ಮೊಟ್ಟೆ ಚಿಕ್ಕಣ್ಣ, ಕಮಲಾ, ಸವಿತಾ, ನಾಗರಾಜ್, ಸಿ.ಎಂ.ಗುರುಸಿದ್ದಯ್ಯ, ಪಿ.ಬಿ.ನಾಯಕ, ಕೆ.ಆರ್.ಗೋಪಿ, ಸರ್ವಮಂಗಳಮ್ಮ ಇತರರು ಇದ್ದರು.

ವಿದ್ಯಾರ್ಥಿಗಳ ಸಂಚಾರಕ್ಕೆ ಫುಟ್‌ಪಾಥ್: ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲತೆಗಾಗಿ ಬಸ್ ನಿಲ್ದಾಣದಿಂದ ಡಿಗ್ರಿ ಕಾಲೇಜಿನವರೆಗೆ ಫುಟ್‌ಪಾಥ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪಟ್ಟಣವನ್ನು ಸುಂದರಗೊಳಿಸಲು 10 ಕೋಟಿ ರೂ. ನಗರೋತ್ಥಾನ ಯೋಜನೆಯಿಂದ ಅನುದಾನ ಬಂದಿದೆ. ಸಾರ್ವಜನಿಕರು ಈ ಕಾರ್ಯಕ್ಕೆ ಸಲಹೆ-ಸೂಚನೆ ನೀಡಿದರೆ ಅದನ್ನು ಆಧರಿಸಿ ಕೆಲಸ ಮಾಡಲಾಗುವುದು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net