

ಚನ್ನಗಿರಿ: ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಸಮೀಪದ ತುಂಗಾಭದ್ರಾ ನದಿಯಿಂದ ದಾವಣಗೆರೆ-ಚಿತ್ರದುರ್ಗ-ಶಿವಮೊಗ್ಗ ತ್ರಿವಳಿ ಜಿಲ್ಲೆಗಳ 121 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಹೆಚ್ಚುವರಿ 167 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಅನುದಾನದ ಜತೆಗೆ ಕೆರೆಗಳ ನೀರಿನ ಸಂಗ್ರಹ ಸಾಮರ್ಥ್ಯ ಆಧರಿಸಿ 0.702 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿಸಲು ಒಪ್ಪುವ ಮೂಲಕ ರೈತರಿಗೆ ಬಂಪರ್ ಕೊಡುಗೆ ನೀಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2017ರಲ್ಲಿ ರೂಪಿಸಲಾದ ಮೂಲ ಯೋಜನೆಯಡಿ 0.989 ಟಿಎಂಸಿ ಅಡಿ ನೀರು ಹರಿಸಲು 415.61 ಕೋಟಿ ರೂ.ಗೆ ಅನುಮೋದನೆ ದೊರೆತಿತ್ತು. ಆದರೆ, ಮೂಲ ಯೋಜನೆ ಪ್ರಕಾರ ಎಲ್ಲ ಕೆರೆಗಳಿಗೆ ನೀರು ಹರಿಸಲಾಗದೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಯೋಜನೆ ಪರಿಷ್ಕರಣೆಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು.
ನೀರಾವರಿ ಇಲಾಖೆ, ಖಾಸಗಿ ಕಂಪನಿ ಸೇರಿ ಕೆರೆಗಳ ಸಮೀಕ್ಷೆ ಕೈಗೊಂಡು ಹೊಸ ಯೋಜನೆ ರೂಪಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿ 415.61 ಕೋಟಿ ರೂ.ಜತೆ ಹೆಚ್ಚುವರಿ 167 ಕೋಟಿ ರೂ. ಹಾಗೂ 0,989 ಟಿಎಂಸಿ ಅಡಿ ಬದಲು 1.691 ಟಿಎಂಸಿ ಅಡಿ ನೀರು ಹರಿಸಲು ಅನುಮೋದನೆ ನೀಡಿದ್ದಾರೆ ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದರು.
ಟೆಂಡರ್ ಕರೆದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆಯಡಿ ಚನ್ನಗಿರಿ ಕಸಬಾ ಹೋಬಳಿಯ 46 ಕೆರೆಗಳೂ ಸೇರಿವೆ ಎಂದು ಮಾಹಿತಿ ನೀಡಿದರು.
ಯೋಜನೆ ಪರಿಷ್ಕರಣೆಯಿಂದ ರೈತರಿಗೆ ಲಾಭ: ಮೂಲ ಯೋಜನೆಯಡಿ ಸಣ್ಣ, ದೊಡ್ಡ ಕೆರೆಗಳನ್ನು ಸರಿಯಾಗಿ ಗುರುತಿಸದೆ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಮೋಟಾರುಗಳ ಸಾಮರ್ಥ್ಯವೂ ಕಡಿಮೆ ಇದೆ ಎಂಬ ದೂರು ಆಧರಿಸಿ 121 ಕೆರೆಗಳ ಸಮೀಕ್ಷೆ ನಡೆಸಿದಾಗ ಅವುಗಳ ನೈಜ ಸಂಗ್ರಹ ಸಾಮರ್ಥ್ಯದಲ್ಲಿ ವ್ಯತ್ಯಾಸ ಕಂಡು ಬಂದಿತು. ಪ್ರಸ್ತುತ ಚಾಲ್ತಿಯಲ್ಲಿರುವಂತೆ ಕೆರೆಗಳ ಶೇ. 75ರಷ್ಟು ಸಂಗ್ರಹಣಾ ಸಾಮರ್ಥ್ಯ( ಶೇ. 50 ಸಂಗ್ರಹ ಸಾಮರ್ಥ್ಯ + ಶೇ. 25 ರಷ್ಟು ಆವಿಯಾಗುವಿಕೆ ) ಆಧರಿಸಿ ನೀರಿನ ಬೇಡಿಕೆ 1.691 ಎಂದು ಲೆಕ್ಕಾಚಾರ ಹಾಕಲಾಯಿತು. ಇದು ಮೂಲ ಯೋಜನೆಗಿಂತ 0.701 ಟಿಎಂಸಿ ಅಡಿ ಅಧಿಕವಾಗಿದೆ.
ಪಂಪಿಂಗ್ ಅವಧಿ 180 ದಿನಕ್ಕೆ ಹೆಚ್ಚಳ: ಈಗಾಗಲೇ ಕಾಮಗಾರಿ ಪ್ರಗತಿ ಹಂತದಲ್ಲಿರುವ ಕಾರಣ ಮೂಲಯೋಜನೆಯಂತೆ ರೈಸಿಂಗ್ ಮೇನ್ ಪೈಪ್‌ಗಳ ಮರುವಿನ್ಯಾಸಕ್ಕೆ ಅವಕಾಶವಿಲ್ಲ. ಹೀಗಾಗಿ ಹೆಚ್ಚುವರಿ ನೀರು ಪಡೆಯಲು ನೀರು ಪಂಪಿಂಗ್ ಅವಧಿಯನ್ನು ಈ ಹಿಂದಿನ 120 ದಿನಗಳ ಅವಧಿ ಬದಲು 180ಕ್ಕೆ ಏರಿಸಲಾಗುತ್ತಿದೆ. 2.91 ಕ್ಯೂಮೆಕ್ಸ್ ಹರಿವಿನೊಂದಿಗೆ ನೀರು ಪಂಪ್ ಮಾಡಲಾಗುತ್ತದೆ.