ದೇಶದ ಸಮಗ್ರತೆ ರಕ್ಷಣೆ ಎಲ್ಲರ ಹೊಣೆ

Channagiri, Sulekere, flag hoisting,
Published on

ಡಾ. ಶ್ರೀ ಗುರುಬಸವ ಸ್ವಾಮೀಜಿ ಹೇಳಿಕೆ l ಸೂಳೆಕೆರೆಯ ಮಧ್ಯಭಾಗದಲ್ಲೇ ಧ್ವಜಾರೋಹಣ

ಚನ್ನಗಿರಿ: ಭಾರತ ಸ್ವಾತಂತ್ರ್ಯ ಬಂದ ನಂತರ ವಿಶ್ವದಲ್ಲಿ ಅಭಿವೃದ್ಧಿ ಹೊಂದಿದ ದೇಶದಲ್ಲಿ ಒಂದಾಗಿದೆ. ಬೇರೆ ದೇಶದಿಂದ ಆಹಾರ ಆಮದು ಮಾಡಿಕೊಳ್ಳುತ್ತಿದ್ದ ಭಾರತೀಯರು ಇಂದು ರಪ್ತು ಮಾಡುವ ಹಂತಕ್ಕೆ ತಲುಪಿದ್ದೇವೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಸೂಳೆಕೆರೆ ಕೆರೆಯ ನಡುವೆ ಬೋಟ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.

ಭಾರತ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಎಲ್ಲ ಕೇತ್ರದಲ್ಲಿ ಸಾಧನೆ ಮಾಡಿದೆ. ಭಾರತೀಯರು ಒಗ್ಗಟ್ಟಾಗಬೇಕಿದೆ. ದೇಶದ ಒಗ್ಗಟ್ಟು ಒಡೆಯವ ಶಕ್ತಿಗೆ ಪ್ರಚೋದನೆ ನೀಡುವಂಥ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ದೇಶದ ಸಮಗ್ರತೆ ಕಾಪಾಡುವ ಜವಾಬ್ದಾರಿ ಎಲ್ಲ ಭಾರತೀಯರ ಮೇಲಿದೆ ಎಂದರು.

ದೇಶದಲ್ಲಿ ಅನೇಕ ಧರ್ಮಗಳಿದ್ದರೂ ಎಲ್ಲರು ಸಹೋದರರಂತೆ ಇದ್ದೇವೆ. ಸ್ವಚ್ಛ ಭಾರತ ಹಾಗೂ ಸದೃಢ ಭಾರತವಾಗಬೇಕಿದೆ. ವಿದ್ಯಾರ್ಥಿಗಳು ವ್ಯಸನಿಗಳಾಗದೆ ರಾಷ್ಟ್ರಪ್ರೇಮದ ಭಾವನೆ ರೂಢಿಸಿಕೊಳ್ಳಬೇಕು. ಅಜ್ಞಾನ, ಅಂಧಕಾರ, ಮೂಢನಂಬಿಕೆ ಮರೆತು ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯಬೇಕು ಎಂದರು.

ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಎಲ್ಲ ಡ್ಯಾಂಗಳು ತುಂಬಿ ನಾಲೆಗೆ ನೀರು ಹರಿ ಬಿಡಲಾಗುತ್ತಿದೆ. ಏಷ್ಯಾದಲ್ಲಿಯೇ ಎರಡನೇ ದೊಡ್ಡ ಕೆರೆ ಖ್ಯಾತಿಯ ಕೆರೆ ನೀರು ನಾಲ್ಲು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ಜೀವನಾಡಿಯಾಗಿದೆ. ನಾಲೆಯ ನೀರನ್ನು ಕೆರೆ ತುಂಬಿಸಿಕೊಂಡರೆ ಮುಂದಿನ ದಿನದಲ್ಲಿ ತೊಂದರೆ ಬರುವುದಿಲ್ಲ ಎಂದರು.

ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ, ಸೂಳೆಕೆರೆ ಉಳಿಸಿ ಖಡ್ಗ ಸಂಸ್ಥೆ ಅಧ್ಯಕ್ಷ ಬಿ.ಆರ್.ರಘು, ಚಂದ್ರಹಾಸ ಹಿರೇಮಳಲಿ, ಸೈಯದ್ ನಯಾಜ್, ಕುಬೇಂದ್ರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net