

ಚನ್ನಗಿರಿ: ಶಿಕ್ಷಣ ಜೀವನ ರೂಪಿಸುತ್ತದೆ. ಓದುವ ಸಂದರ್ಭದಲ್ಲಿ ಬೇರೆ ಆಲೋಚನೆಗಳಿಗೆ ಮನಸ್ಸು ನೀಡಿ, ಮುಂದೆ ಬರುವಂಥ ಸುಂದರ ದಿನಗಳನ್ನು ಹಾಳು ಮಾಡಿಕೊಳ್ಳಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಯಪ್ಪ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೋಮವಾರ ಆಯೋಜಿಸಿದ್ದ್ದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣಕ್ಕೆ ಅಗಾಧ ಶಕ್ತಿ ಇದೆ. ಸಮಾಜದಲ್ಲಿ ವಿದ್ಯಾವಂತರಿಗೆ ಸಿಗುವ ಗೌರವ, ಮರ್ಯಾದೆಗಳು ಬೇರೆಯವರಿಗೆ ಸಿಗುವುದಿಲ್ಲ. ಕಾಲೇಜು ಶಿಕ್ಷಣ ವಿದ್ಯಾರ್ಥಿಗಳ ಜೀವನದ ದಿಕ್ಕು ಬದಲಾಯಿಸುತ್ತವೆ. ಉಪನ್ಯಾಸಕರು ನೀಡುವಂಥ ಪಠ್ಯಗಳಲ್ಲಿ ಆಸಕ್ತಿ ತೋರಿಸಿ ಕಲಿತರೆ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು. ಓದಿನತ್ತ ಗಮನ ನೀಡಬೇಕು ಎಂದು ಹೇಳಿದರು.
ಧರ್ಮಸ್ಥಳ ಡಾ. ಶ್ರೀ ವೀರೇಂದ್ರ ಹೆಗ್ಗೆಡೆ ಅವರು ರಾಜ್ಯದ ಎಲ್ಲ ಕಡೆ ಸಂಸ್ಥೆಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಓದು ನಿಲ್ಲಿಸಬಾರದು ಎನ್ನುವ ಉದ್ದೇಶದಿಂದ ಸಂಸ್ಥೆಗೆ 25ನೇ ವರ್ಷ ತುಂಬಿದ ಪ್ರಯುಕ್ತ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಶಿಷ್ಯವೇತನ ನೀಡುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸಂಸ್ಥೆಯಿಂದ ಅತಿಥಿ ಶಿಕ್ಷಕರನ್ನು ನೀಡಿ ಅವರ ಗೌರವಧನ ಭರಿಸುತ್ತದೆ. ಶಾಲೆಗೆ ಬೇಕಾದ ಪೀಠೋಪಕರಣಗಳನ್ನು ನೀಡುತ್ತ ಬಂದಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜನ ಜಾಗೃತಿ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ಮಾತನಾಡಿ, ಪಾಲಕರು ಮಕ್ಕಳ ಭವಿಷ್ಯ ರೂಪಿಸಲು ಕಷ್ಟಗಳನ್ನು ಅನುಭವಿಸುತ್ತಾರೆ. ನಿಮ್ಮಿಂದ ಬೇರೆ ಏನನ್ನು ನೀರೀಕ್ಷೆ ಮಾಡುವುದಿಲ್ಲ. ಹೆಚ್ಚು ಅಂಕಗಳನ್ನು ಪಡೆಯದಿದ್ದರೂ ಚಿಂತೆ ಇಲ್ಲ, ಸಂಸ್ಕಾರ ಕಲಿತರೆ ಸಾಕು ಎಂದು ಬಯಸುತ್ತಾರೆ. ಅವರ ಆಸೆಯಂತೆ ಉತ್ತಮ ಶಿಕ್ಷಣ ಪಡೆದು ಸಮಾಜಮುಖಿಗಳಾಗಿ ಬಾಳಬೇಕು ಎಂದರು.
ಸಂಸ್ಥೆಯ ಚಿತ್ರದುರ್ಗ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಇದುವರೆಗೆ 24,400 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗಿದೆ. ಜಿಲ್ಲೆಯಲ್ಲಿ 1,750 ಮತ್ತು ಚನ್ನಗಿರಿ ತಾಲೂಕಿನಲ್ಲಿ 338 ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. 1035 ಶಾಲೆಗಳಿಗೆ ರಾಜ್ಯದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ, ಕಲಿಕೆಗೆ ಹೊಸ ಚೈತನ್ಯ ತುಂಬಿದೆ ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯರಾದ ಟಿ.ಎನ್. ಜಗದೀಶ್, ಮಹೇಶ್ವರಪ್ಪ, ಇಮ್ರಾನ್, ಯೋಜನಾಧಿಕಾರಿ ಎ.ವಿ.ಅಜಿತ್‌ಕುಮಾರ್, ಸಂತೇಬೆನ್ನೂರು ಯೋಜನಾಧಿಕಾರಿ ಎ.ಜೆ. ಪ್ರವೀಣ್‌ಕುಮಾರ್ ಇತರರಿದ್ದರು.