ಸಂಘಟಿತರಾದರೆ ಸಮುದಾಯ ಅಭಿವೃದ್ಧಿ ಸಾಧ್ಯ

Channagiri, Srikrishna, Janmashtami,
Published on

ಯಾದವ ಸಮಾಜದ ಅಧ್ಯಕ್ಷ ತಿಪ್ಪಗೊಂಡನಹಳ್ಳಿ ರಂಗಸ್ವಾಮಿ ಅನಿಸಿಕೆ I ಚನ್ನಗಿರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಚನ್ನಗಿರಿ: ಯಾದವರು ಸಂಘಟಿತರಾದರೆ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯ ಎಂದು ತಾಲೂಕು ಯಾದವ ಸಮಾಜದ ಅಧ್ಯಕ್ಷ ತಿಪ್ಪಗೊಂಡನಹಳ್ಳಿ ರಂಗಸ್ವಾಮಿ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಸೋಮವಾರ ನಾಡಹಬ್ಬಗಳ ಸಮಿತಿ ಸಹಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದರು.

ಯಾದವ ಸಮಾಜ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದೆ ಉಳಿದಿದೆ. ಯಾವ ಸರ್ಕಾರವೂ ಸಮುದಾಯದ ಅಭಿವೃದ್ಧಿ ಮಾಡುವತ್ತ ನೋಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಯಾದವರ ಸಂಖ್ಯೆ ಕಡಿಮೆ ಇದೆ. ಸರ್ಕಾರದ ಸೌಲಭ್ಯ ಪಡೆಯಬೇಕೆಂದರೆ ಎಲ್ಲರೂ ಸಂಘಟಿತರಾಗಬೇಕು ಎಂದರು.

ಯಾದವರಿಗೆ ಮೋಸ, ಕಪಟ ತಿಳಿದಿಲ್ಲ. ಎಲ್ಲರೊಂದಿಗೆ ಪ್ರೀತಿಯಿಂದ ಇರುತ್ತಾರೆ. ಎಲ್ಲರನ್ನೂ ಬಂಧುಗಳಂತೆ ಕಾಣುತ್ತಾರೆ. ಶ್ರೀಕೃಷ್ಣನನ್ನು ದೇವರು ಎಂದು ಕಾಣುವ ಜನರು ನಮ್ಮನ್ನು ಮರೆಯಬಾರದು ಎಂದರು.

ದೇಶದಲ್ಲಿ ಕೃಷ್ಣ ಜನ್ಮಾಷ್ಟಮಿ ಒಂದು ಪ್ರಮುಖವಾದ ಹಬ್ಬವಾಗಿದೆ. ಶ್ರೀಕೃಷ್ಣನ ಜನ್ಮದಿನವನ್ನು ಶ್ರಾವಣ ಕೃಷ್ಣ ಅಷ್ಟಮಿಯಂದು ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ ಎಂದು ತಿಳಿಸಿದರು.

ಹಿಂದು ಗ್ರಂಥಗಳ ಪ್ರಕಾರ ಶ್ರೀ ಕೃಷ್ಣ ಮಥುರಾ ಪಟ್ಟಣದಲ್ಲಿ ದೇವಕಿ ಮತ್ತು ವಾಸುದೇವನ ಎಂಟನೇ ಪುತ್ರನಾಗಿ ಜನಿಸಿದರು. ಮಹಾಭಾರತದಲ್ಲಿ ಪ್ರಮುಖ ಪಾತ್ರ ವಹಿಸಿ, ಪಾಂಡವರ ಪರವಾಗಿ ನಿಂತು ಧರ್ಮದ ಗೆಲುವಿಗೆ ಕಾರಣರಾದರು. ಶ್ರೀಕೃಷ್ಣನ ಬಾಲ್ಯ, ಯೌವನ ಮತ್ತು ಬುದ್ಧಿವಂತಿಕೆಯನ್ನು ಜನರು ಇಂದಿಗೂ ಗೌರವಿಸುತ್ತಾರೆ ಎಂದರು.

ತಾಲೂಕು ಯಾದವ ಸಮಾಜದ ಕಾರ್ಯದರ್ಶಿ ಚಿಕ್ಕೊಡ ರಂಗಸ್ವಾಮಿ, ಮುಖಂಡರಾದ ತಿಮ್ಮರಾಜು, ತಿಮ್ಮೇಶ್, ಗೋವಿಂದಪ್ಪ, ತಾಲೂಕು ಕಚೇರಿ ಶಿರಸ್ತೇದಾರ್ ಮೋಹನ್, ದ್ವಿತೀಯ ದರ್ಜೆ ಸಹಾಯಕ ರುದ್ರಮುನಿ, ಪುರಸಭೆ ಆಹಾರ ನಿರೀಕ್ಷಕ ಶಿವರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net